ಕುಮಟಾ: ತಾಲೂಕಿನ ಬೆಳ್ಳಂಗಿಯಲ್ಲಿ ಆಸ್ತಿಗಾಗಿ ತಂದೆ ಮಕ್ಕಳೇ ಹೊಡೆದಾಡಿಕೊಂಡಿದ್ದು, ಅಪ್ಪ ಮಕ್ಕಳ ಮೇಲೆ, ಮಕ್ಕಳು ಅಪ್ಪನ ಮೇಲೆ ಪ್ರಕರಣ ದಾಖಲಿಸಿದ ಘಟನೆ ಸಂಭವಿಸಿದೆ.
ಬೆಳ್ಳಂಗಿಯ ನಿವಾಸಿ ಮಹಾಬಲೇಶ್ವರ ವಿಠಲ ನಾಯ್ಕ (72) ಮತ್ತು ಯಮುನಾ ಮಹಾಬಲೇಶ್ವರ ನಾಯ್ಕ (60) ದಂಪತಿಗಳಿಗೆ ಸೀತಾ ಶಿವರಾಮ ಮಡಿವಾಳ (39), ಗಂಡು ಮಕ್ಕಳಾದ ಮಹೇಂದ್ರ ಮಹಾಬಲೇಶ್ವರ ನಾಯ್ಕ (39) ಮತ್ತು ಸಂತೋಷ ಮಹಾಬಲೇಶ್ವರ ನಾಯ್ಕ (41) ಮೂವರು ಮಕ್ಕಳಿದದ್ದು, ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ತಂದೆ ಹಾಗೂ ಇಬ್ಬರು ಗಂಡು ಮಕ್ಕಳ ಮಧ್ಯೆ ಆಗಾಗ ಜಗಳ ನಡೆಯುತ್ತಲೇ ಇದ್ದವು.
ಹಿರಿಯ ಮಗ ಸಂತೋಷ ನಾಯ್ಕ ಬೆಳ್ಳಂಗಿಯಲ್ಲಿಯೇ ಬೇರೆಯಾಗಿ ವಾಸವಾಗಿದ್ದಾರೆ.ಮಹೇಂದ್ರ ನಾಯ್ಕ ಹೆಬೈಲ್‌ದಲ್ಲಿ ವಾಸವಾಗಿದ್ದಾರೆ. ಆದಾಗ್ಯೂ ಇವರ ಮಧ್ಯೆ ಆಸ್ತಿಗಾಗಿ ಪದೇ ಪದೇ ಜಗಳ ನಡೆಯುತ್ತಲೇ ಇದ್ದು, ಇತ್ತೀಚಿಗೆ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ ಘಟನೆ ಸಂಭವಿಸಿದೆ.
ಆಸ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ತೆಗೆದ ಮಕ್ಕಳಾದ ಮಹೇಂದ್ರ ನಾಯ್ಕ, ಸಂತೋಷ ನಾಯ್ಕ, ಸೊಸೆಯಂದಿರಾದ ಸುಮತಿ ಮಹೇಂದ್ರ ನಾಯ್ಕ, ಪ್ರಭಾವತಿ ಸಂತೋಷ ನಾಯ್ಕ ಹೀಗೆ ನಾಲ್ವರು ಸೇರಿ, ನನಗೆ ಹಾಗೂ ನನ್ನ ಹೆಂಡತಿ ಯಮುನಾ ನಾಯ್ಕ, ತಾಯಿಯ ಮನೆಯಲ್ಲಿ ಉಳಿಯಲು ಬಂದಿದ್ದ ಮಗಳಾದ ಸೀಮಾ ಶಿವರಾಮ ಮಡಿವಾಳ, ಮೊಮ್ಮಗಳು ಭಾಗ್ಯಜ್ಯೋತಿ ಶಿವರಾಮ ಮಡಿವಾಳರ ಮೇಲೆ ಹಲ್ಲೆ ನಡೆಸಿದ್ದಾರೆಂದು ಮಹಾಬಲೇಶ್ವರ ನಾಯ್ಕ ಪರವಾಗಿ ದೂರು ನೀಡಲಾಗಿದೆ.
ಇನ್ನೊಂದೆಡೆ ಮಹಾಬಲೇಶ್ವರ ನಾಯ್ಕ ಅವರು, ನಿಲ್ಲಿಸಿಟ್ಟ ಬೈಕ್‌ಗೆ ಬೆಂಕಿ ಹಾಕಲು ಬಂದದ್ದಲ್ಲದೇ ಏರ್‌ಗನ್‌ನಿಂದ ಗುಂಡು ಹಾರಿಸಿ ಹಲ್ಲೆ ನಡೆಸಿದ್ದಾರೆಂದು ಮಕ್ಕಳಾದ ಮಹೇಂದ್ರ ಮಹಾಬಲೇಶ್ವರ ನಾಯ್ಕ, ಸಂತೋಷ ಮಹಾಬಲೇಶ್ವರ ನಾಯ್ಕ ತಂದೆ, ತಾಯಿ ಹಾಗೂ ಅಕ್ಕನ ಮಗಳ ಮೇಲೆ ದೂರು ನೀಡಿದ್ದಾರೆ.