ಕಾರವಾರ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ವಿಜ್ಞಾನ ಸಂಸ್ಥೆ, ಮಾನಸಿಕ ಆರೋಗ್ಯ ವಿಭಾಗ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಭವನದಲ್ಲಿ ಗುರುವಾರ ಜರುಗಿದ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆ ಕಾರ್ಯಕ್ರಮವನ್ನು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್.ದರಗದ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವ ರೋಗಿಯನ್ನು ನಿರ್ಲಕ್ಷ್ಯ ಮಾಡದೆ ಅಗತ್ಯ ಚಿಕಿತ್ಸೆ, ಔಷಧೋಪಚಾರ ಕೊಡಿಸುವ ಮೂಲಕ ಸಮಾಜದಲ್ಲಿ ಗೌರವಯುತವಾಗಿ ಬಾಳುವಂತೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ಸ್ಕಿಜೋಫ್ರೇನಿಯಾ ರೋಗವು ಮಾನಸಿಕ ಖಿನ್ನತೆಯಿಂದ ಬಳಲುವ ಖಾಯಿಲೆಯಾಗಿದ್ದು, ವಿಶ್ವದಾದ್ಯಂತ ಕಂಡುಬರುವ ರೋಗವಾಗಿದೆ. ಎಲ್ಲರೂ ಒಂದಲ್ಲ ಒಂದು ರೀತಿ ಈ ರೋಗಕ್ಕೆ ತುತ್ತಾಗುತ್ತಲೇ ಇರುತ್ತಾರೆ. ಅನುಮಾನ, ಅಪನಂಬಿಕೆ, ಅತಿಯಾದ ಕಾಳಜಿ ಈ ರೋಗಕ್ಕೆ ರಹದಾರಿಯಾಗಿದ್ದು, ಮಾನಸಿಕವಾಗಿ ಗಟ್ಟಿತನ ಬೆಳೆಸಿಕೊಳ್ಳುವ ಮೂಲಕ ರೋಗವು ಸುಳಿಯದಂತೆ ನೋಡಿಕೊಳ್ಳಬಹುದಾಗಿದೆ ಎಂದರು.
ಮಾನಸಿಕ ಖಾಯಿಲೆಗಳಿಗೆ ಅಗತ್ಯ ಚಿಕಿತ್ಸೆ, ಔಷಧೋಪಚಾರ ಲಭ್ಯವಿದ್ದು ಅದರ ಪ್ರಯೋಜನ ಪಡೆದು ಮುಖ್ಯವಾಹಿನಿಗೆ ಬರುವ ಕಾರ್ಯವಾಗಬೇಕು. ವೈದ್ಯಕೀಯ ನೆರವು ಪಡೆಯುವುದು ಹಾಗೂ ಕೊಡಿಸುವುದು ಪ್ರತಿಯೊಬ್ಬರ ಅಗತ್ಯ ಕರ್ತವ್ಯವಾಗಿದೆ. ಮಾನಸಿಕ ರೋಗದಿಂದ ಬಳಲುತ್ತಿರುವವರು ಕಂಡುಬಂದಲ್ಲಿ ಅಂತಹವರಿಗೆ ಚಿಕಿತ್ಸೆ ಕೊಡಿಸಲು ಸಂಬಂಧಿಸಿದವರು ಇಲ್ಲವೇ ಸುತ್ತಮುತ್ತಲಿನವರು ಅಗತ್ಯ ಕಾಳಜಿ ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಶಂಕರ್‌ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಪ್ರತಿ ವರ್ಷ ಮೇ 24ರಂದು ವಿಶ್ವಸ್ಕಿಜೋಫ್ರೇನಿಯಾ ದಿನಾಚರಣೆ ಆಚರಿಸಲಾಗುತ್ತಿದೆ. ಮನೋರೋಗದಿಂದ ಬಳಲುತ್ತಿರುವವರಿಗೆ ಅಗತ್ಯ ಚಿಕಿತ್ಸೆ, ಔಷಧೋಪಚಾರ ನೀಡುವ ಮೂಲಕ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವವರನ್ನು ಮುಖ್ಯವಾಹಿನಿಗೆ ತಂದು ಸಾಮಾನ್ಯ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ಬಳಿಕ ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ವೈದ್ಯಕೀಯ ಅಧಿಕಾರಿ ಶಿವಾನಂದ ಕುಡಾಳಕರ್ ಮಾತನಾಡಿ, ಈ ರೋಗವು ವ್ಯಕ್ತಿಯು ತನ್ನಿಂದ ತಾನೇ ತಂದುಕೊಳ್ಳುವಂತಹದ್ದು. ಎಷ್ಟೇ ಕಷ್ಟದ ಪರಿಸ್ಥಿತಿ ಎದುರಾದರೂ ಕುಗ್ಗದೇ ಗಟ್ಟಿಯಾಗಿ ನಿಲ್ಲಬೇಕು. ಬೇರೆಯವರ ನಕಾರಾತ್ಮಕ ಮಾತುಗಳಿಗೆ ನಿರ್ಲಕ್ಷ್ಯವಹಿಸಬೇಕು. ಮಾದಕ ವಸ್ತುಗಳಿಂದ ದೂರವಿರಬೇಕು. ಮನಸಿನ ಕೊಳೆಯನ್ನು ತೊಡೆದುಹಾಕಬೇಕು. ಸ್ವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.
ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರಿಗೆ ಅಗತ್ಯ ಚಿಕಿತ್ಸೆ ಹಾಗೂ ಔಷಧೋಪಚಾರ ನೀಡಲು ಆರೋಗ್ಯ ಇಲಾಖೆ ಸಿದ್ಧವಾಗಿದೆ. ಅಂತಹ ವ್ಯಕ್ತಿಗಳು ಕಂಡುಬಂದಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಚಿಕಿತ್ಸೆ ಕೊಡಿಸಲು ಮುಂದಾಗಬೇಕೆಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಕಾರದ ವತಿಯಿಂದ ದೊರೆಯುವ ಆರೋಗ್ಯ ಸವಲತ್ತುಗಳನ್ನು ಅಗತ್ಯವಿರುವವರು ಪಡೆಯಬೇಕು ಆ ಮೂಲಕ ಸಾಮಾನ್ಯ ಜೀವನ ನಡೆಸುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅನ್ನಪೂರ್ಣ ವಸ್ತ್ರದ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ರಮೇಶ್‌ರಾವ್, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ಜಗದೇಶ್ ನಾಯ್ಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಅರ್ಚನಾ ನಾಯ್ಕ್, ಜಿಲ್ಲಾ ಆಸ್ಪತ್ರೆ ಮನೋರೋಗ ತಜ್ಞ ಡಾ.ಅಕ್ಷಯ್ ಘಾಟಕ, ತಾಲೂಕಾ ಆರೋಗ್ಯಾಧಿಕಾರಿ ಡಾ.ಸೂರಜ್ ನಾಯಕ್ ಸೇರಿದಂತೆ ನರ್ಸಿಂಗ್ ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.