ಮುಂಡಗೋಡ: ತಾಲೂಕಿನ ಇಂದೂರು ಗ್ರಾಮ ಪಂಚಾಯತ್‌ನ ಕೊಪ್ಪ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣವಾದ ಕುದುರೆಗಟ್ಟಿ ಕೆರೆ ಕಳೆದ ಎರಡು ದಿನಗಳ ಹಿಂದೆ ಆದ ಮಳೆನೀರಿನಿಂದ ಮೈದುಂಬಿ ನಿಂತಿದೆ.
ಕಳೆದೆರಡು ತಿಂಗಳ ಹಿಂದೆ ಸುಮಾರು 4ಲಕ್ಷ ವೆಚ್ಚದಲ್ಲಿ ಕೈಗೊಂಡ ಕುದುರೆಗಟ್ಟಿ ಕೆರೆ ಕಾಮಗಾರಿ ಇದಾಗಿದ್ದು ಈವರೆಗೆ 533 ಮಾನವದಿನಗಳನ್ನು ಸೃಜಿಸಲಾಗಿದೆ. ಇನ್ನು ಈ ಕಾಮಗಾರಿಯಿಂದಾಗಿ ಕೆರೆ ಸುತ್ತಲಿನ ರೈತರ ಹೊಲಗದ್ದೆಗಳಿಗೆ ಅನುಕೂಲವಾಗಿದೆ. ಜೊತೆಗೆ ದನಕರುಗಳು, ಪ್ರಾಣಿ ಪಕ್ಷಿಗಳ ಬಾಯಾರಿಕೆ ನೀಗಿಸುತ್ತಿದೆ. ಸುತ್ತಲಿನ ಬೋರ್‌ವೆಲ್‌ಗಳಲ್ಲಿಯೂ ನೀರಿನ ಪ್ರಮಾಣ ಹೆಚ್ಚಾಗಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಮಹಾಮಾರಿ ಕೊವೀಡ್ ನಿಂದಾಗಿ ಕೆರೆಗಳ ಕಾಮಗಾರಿ ಕುಂಠಿತಗೊಂಡಿದ್ದು ಪ್ರಸ್ತುತ ಆರ್ಥಿಕ ವರ್ಷದಲ್ಲಿ 39 ಕೆರೆಗಳ ಬೇಡಿಕೆಯಿದೆ. ಈಗಾಗಲೇ 1 ಕೆರೆ ಕಾಮಗಾರಿ ಪೂರ್ಣಗೊಂಡಿದೆ. ಇದರ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕಾಲುವೆ, ಟ್ರೆಂಚ್, ಕೃಷಿ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ.
ಉದ್ಯೋಗ ಖಾತ್ರಿ ಕೆಲಸದಿಂದ ಕೆರೆ ಹೂಳೆತ್ತಿ ನೀರಿನ ಅನುಕೂಲತೆ ಕಲ್ಪಿಸಿ ಕೊಟ್ಟಿದ್ದು ಮಾತ್ರವಲ್ಲದೆ ನಮ್ಮ ಕೂಲಿಕಾರರಿಗೆ ಕೆಲಸ ನೀಡಿದ್ದಾರೆ. ಇದೀಗ ಮಳೆನೀರಿನಿಂದಾಗಿ ಕೆರೆ ತುಂಬಿ ಸುತ್ತಲಿನ ರೈತರು, ದನಕರು, ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗಿದೆ. ಕೆರೆ ಆಳ ಹೆಚ್ಚಿದ್ದರಿಂದ ಕೆರೆಯ ನೀರು ಹೊಲಗಳಿಗೆ ನುಗ್ಗದಂತೆ ಸುರಕ್ಷಿತವಾಗಿದೆ. ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಒಳ್ಳೆ ಕೆಲಸ ನೀಡುತ್ತಿದ್ದಾರೆ ಎಂದು ಕೊಪ್ಪ ಗ್ರಾಮದ ರೈತ ಬಸಪ್ಪ ಚನ್ನಬಸಪ್ಪ ಅವರು ಹೇಳಿದರು.
ಕಳೆದ ಎರಡು ತಿಂಗಳ ಹಿಂದೆ ನರೇಗಾ ಯೋಜನೆಯಡಿ ಕೆರೆ ಹೂಳೆತ್ತಲಾಗಿತ್ತು. ದಿಢೀರ್ ಮಳೆಯಿಂದಾಗಿ ಕೆರೆ ತುಂಬಿದೆ. ಇದರ ಸುತ್ತಲಿನ ರೈತರಿಗೆ ಅನುಕೂಲವಾಗಿದೆ. ಇನ್ನು ಕೆಲವು ಕೆರೆ ಕಾಮಗಾರಿಗಳ ಬೇಡಿಕೆಯಿದೆ. ಸದ್ಯದಲ್ಲೇ ಆ ಕೆರೆಗಳ ಕೆಲಸವು ಆರಂಭವಾಗಲಿದೆ. ಕೂಲಿಕಾರರಿಗೆ ಕೆಲಸ ನೀಡಿ ನಿರುದ್ಯೋಗ ನಿವಾರಣೆ ಮಾಡುವ ಕೆಲಸದಲ್ಲಿ ನಿರತರಾಗಿದ್ದೆವೆ ಎಂದು ಅಭಿವೃದ್ಧಿ ಅಧಿಕಾರಿಗಳಾದ ಎಮ್.ಎಸ್.ವಾರದ ಅಭಿಪ್ರಾಯಪಟ್ಟರು. ತಾಲೂಕು ಪಂಚಾಯತ್ ಐಇಸಿ ಸಂಯೋಜಕರು ಇದ್ದರು.