ಸಿದ್ದಾಪುರ: ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ನಾಣಿಕಟ್ಟಾ ಸರ್ಕಾರಿ ಪ್ರೌಢಶಾಲೆಯ ಮೀನಾಕ್ಷಿ ಮಂಜುನಾಥ ಗೌಡ ಹೊನ್ನಕುಣಿ ಇವಳನ್ನು ತಾಲೂಕು ಗ್ರಾಮ ಒಕ್ಕಲಿಗರ ಯುವಬಳಗದವರು ಭಾನುವಾರ ಅವರ ಮನೆಗೆ ತೆರಳಿ ಅಭಿನಂದಿಸಿ ಸನ್ಮಾನಿಸಿದರು.
ಸಿದ್ದಾಪುರ ಆರಕ್ಷಕ ಇಲಾಖೆಯ ಎಎಸ್‌ಐ ರಮೇಶ ಗೌಡ ಇವರು ಮೀನಾಕ್ಷಿ ಗೌಡ ಅವರನ್ನು ಅಭಿನಂದಿಸಿ ಮಾತನಾಡಿ ಒಕ್ಕಲಿಗ ಸಮಾಜದವರು ಇತ್ತೀಚಿನ ದಿನದಲ್ಲಿ ಎಲ್ಲ ಕ್ಷೇತ್ರದಲ್ಲಿಯೂ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದಾರೆ. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಕಡಿಮೆ. ಗ್ರಾಮೀಣ ಭಾಗದಲ್ಲಿದ್ದು ಉತ್ತಮ ಅಂಕ ಪಡೆದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿರುವುದು ಹೆಮ್ಮೆ ತರುವಂತಹುದಾಗಿದೆ ಎಂದರು.
ತಾಲೂಕು ಯುವಬಳಗದ ಅಧ್ಯಕ್ಷ ವಿ.ಆರ್.ಗೌಡ ಹೆರೂರು ಮಾತನಾಡಿ ಮೀನಾಕ್ಷಿ ಗೌಡ ಅವಳ ಮುಂದಿನ ಶಿಕ್ಷಣಕ್ಕೆ ಯಾವ ರೀತಿಯ ತೊಂದರೆ ಆಗದಂತೆ ಸಮಾಜದಿಂದ ಸಹಕಾರ ನೀಡಲಾಗುವುದು ಎಂದು ಹೇಳಿದರು.
ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ ಮಾತನಾಡಿ ಮೂಲಭೂತ ಸೌಕರ್ಯದ ಕೊರತೆಯ ನಡುವೆಯೂ ಸಾಧನೆ ಮಾಡಿರುವುದು ಅವಳಲ್ಲಿರುವ ಪ್ರತಿಭೆಯನ್ನು ಗುರುತಿಸಬಹುದಾಗಿದೆ. ಎಲ್ಲಿ ಇದ್ದರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ಮೀನಾಕ್ಷಿ ಗೌಡ ಎಲ್ಲರಿಗೂ ಮಾದರಿ ಆಗಿದ್ದಾರೆ ಎಂದು ಹೇಳಿದರು.
ಯುವ ಬಳಗದ ಪದಾಧಿಕಾರಿಗಳಾದ ಜಗನ್ನಾಥ ಗೌಡ, ರಾಘವೇಂದ್ರ ಗೌಡ, ಹೇಮಂತ ಗೌಡ, ವಿನಾಯಕ ಗೌಡ, ಕೇಶವ ಗೌಡ, ಶಶಾಂಕ ಗೌಡ, ನಿರ್ಮಲ ರಮೇಶ ಗೌಡ, ಮಂಜುನಾಥ ಗೌಡ, ಗೋಧಾವರಿ ಗೌಡ ಉಪಸ್ಥಿತರಿದ್ದರು. ಯುವ ಬಳಗದ ಕಾರ್ಯದರ್ಶಿ ಎಂ.ಟಿ.ಗೌಡ ಸ್ವಾಗತಿಸಿದರು.