ಶಿವಮೊಗ್ಗ: ಇತಿಹಾಸ ಪ್ರಸಿದ್ಧ ಬಿದನೂರು ಕೋಟೆ ಆವರಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಮುಡುಗೊಪ್ಪ ಗ್ರಾಮ ಪಂಚಾಯಿತಿಗಳು ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸಂಯುಕ್ತವಾಗಿ ಆಯೋಜಿಸಿದ್ದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮಕ್ಕೆ ಭಾರತೀಯ ಇತಿಹಾಸ ಸಂಕಲನ ಸಮಿತಿಯನ್ನು ಕಡೆಗಾಣಿಸಿದ್ದಕ್ಕೆ ಸಮಿತಿಯ ಪದಾಧಿಕಾರಿಗಳು ತೀವೃ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವರದಿಗಾರರ ಪ್ರಶ್ನೆಗೆ ಪ್ರತಿಕ್ರಯಿಸಿರುವ ಸಮಿತಿಯ ಕರ್ನಾಟಕ ದಕ್ಷಿಣ ಪ್ರಾಂತದ ಸಂಚಾಲಕರಾದ ಡಾ.ಬಾಲಕೃಷ್ಣ ಹೆಗಡೆ, ರಾಜ್ಯ ಸಮಿತಿಯ ಸದಸ್ಯ ಅಜೇಯಕುಮಾರ ಶರ್ಮಾ ಮತ್ತು ಜಿಲ್ಲಾಧ್ಯಕ್ಷರಾದ ನಿಧಿನ ಓಲಿಕಾರ, ಸಮಿತಿಯು ವಿಶೇಷವಾಗಿ ಜಿಲ್ಲೆಯ ಇತಿಹಾಸ, ಸಂಸ್ಕೃತಿ, ಪರಂಪರೆಯ ರಕ್ಷಣೆ, ಇತಿಹಾಸ ಸಂಶೋಧನೆ, ಸಂಕಲನ, ತರಬೇತಿ, ಜಾಗೃತಿ ಮೊದಲಾದ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಇದು ಜಿಲ್ಲಾಡಳಿತ, ಸಂಸ್ಕೃತಿ ಇಲಾಖೆಗಳಿಗೆ ತಿಳಿಯದ ಸಂಗತಿಯೇನೂ ಅಲ್ಲ. ಆದರೂ ಇಂದಿನ ಕಾರ್ಯಕ್ರಮದ ಬಗ್ಗೆ ಸಮಿತಿಯ ಪದಾಧಿಕಾರಿಗಳಿಗಾಗಲೀ, ಜಿಲ್ಲೆಯ ಇತಿಹಾಸ ಉಪನ್ಯಾಸಕರಿಗಾಗಲೀ ಯಾವ ಮಹಿತಿಯನ್ನೂ ನೀಡದೆ ಪ್ರಮುಖ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಮ್ಮ ಕೆಲಸ ಕಾರ್ಯಗಳಿಗೆ ಸರ್ಕಾರ, ಸಂಬಂಧಿಸಿದ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತನ್ನೂ ನೀಡದಿದ್ದರೆ ಪ್ರಯೋಜನ ಏನು ಎಂದು ಅವರು ಖಾರವಾಗಿ ಪ್ರಶ್ನಿಸಿದರು.