ಹೊನ್ನಾವರ:ತಾಲೂಕಿನ ಬ್ಲಾಕ್ ಕಾಂಗ್ರೆಸ್ ಸಮಿತಿ ಪಟ್ಟಣದ ಸೋಶಿಯಲ್ ಕ್ಲಬ್ ಸಭಾಭವನದಲ್ಲಿ ಏರ್ಪಡಿಸಿದ ಮತಗಟ್ಟೆ ಸಮಿತಿ ರಚನಾ ಕಾರ್ಯಕ್ರಮಕ್ಕೆ ಮಾಜಿ ಶಾಸಕಿ ಶಾರದಾ ಶೆಟ್ಟಿ ಚಾಲನೆ ನೀಡಿ, ಸೇರಿದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ನಾಲ್ಕು ವರ್ಷ ಕಳೆದು ಇನ್ನೊಂದು ಚುನಾವಣೆ ಸಮಿಪಿಸುತ್ತಿದ್ದರೂ, ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಕೈಗೊಳ್ಳದೇ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಗಾಳಿಗೆ ತೂರುತ್ತಿದೆ ಎಂದು ಆಪಾದಿಸಿದರು.
ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದ್ದು, ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿದೆ. ಜನರ ಬಾಳು ದುಸ್ತರವಾಗಿದೆ ಎಂದರು. ಬಿಜೆಪಿ ಸರ್ಕಾರ ತನ್ನ ಎಲ್ಲಾ ತಪ್ಪುಗಳನ್ನು ಮರೆಮಾಚಲು ಜನರ ಭಾವನೆಗಳನ್ನು ಕೆರಳಿಸಿ ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುತ್ತಿದೆ ಎಂದು ಅವರು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ವೀಕ್ಷಕರಾಗಿ ಆಗಮಿಸಿದ ಪಕ್ಷದ ಹಿರಿಯ ಧುರೀಣ, ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ರಾಮಾ ಮೊಗೇರ ಮಾತನಾಡಿ, ಪರೇಶ ಮೇಸ್ತ ಸಾವಿನ ಪ್ರಕರಣವನ್ನು ಬಿಜೆಪಿ ಪಕ್ಷ ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡು ಈಗ ಎಲ್ಲವನ್ನು ಮರೆತಿದೆ ಎಂದರು. ಸಿದ್ದರಾಮಯ್ಯ ಸರ್ಕಾರ ಪರೇಶ ಮೇಸ್ತನ ಪ್ರಕರಣವನ್ನು ಅವರ ತಂದೆ- ತಾಯಿಯ ಒತ್ತಾಯದ ಮೇರೆಗೆ ಸಿಬಿಐ ತನಿಖೆಗೆ ನೀಡಿದ್ದರೂ, ಕೇಂದ್ರದ ಮೋದಿ ಸರ್ಕಾರದ ಅಧೀನದಲ್ಲಿರುವ ಸಿಬಿಐನಿಂದ ಪರೇಶ ಮೇಸ್ತನಿಗೆ ನ್ಯಾಯ ಸಿಗುವುದು ಮರೀಚಿಕೆಯಾಗಿದೆ ಎಂದರು. ಈ ಕುರಿತಂತೆ ಬಿಜೆಪಿಯ ಶಾಸಕರು ಮತ್ತು ಸಂಸದರು ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಆಪಾದಿಸಿದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್.ತೆಂಗೇರಿ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಇದೇ ಮೊದಲ ಬಾರಿ ಅಖಿಲ ಭಾರತ ಕಾಂಗ್ರೆಸ್ ಪಕ್ಷ ಡಿಜಿಟಲ್ ವ್ಯವಸ್ಥೆಯ ಮೂಲಕ ಸದಸ್ಯತ್ವ ನೋಂದಣಿ ಆಂದೋಲನವನ್ನು ದೇಶಾದ್ಯಂತ ಯಶಸ್ವಿಯಾಗಿ ಮುಗಿಸಿದೆ. ಪ್ರತಿ ಬೂತ್ ಮಟ್ಟದಲ್ಲಿ 25 ಸದಸ್ಯರನ್ನೊಳಗೊಂಡ ಕ್ರಿಯಾಶೀಲ ಸಮಿತಿಯನ್ನು ರಚಿಸುವಂತೆ ಬ್ಲಾಕ್ ಕಾಂಗ್ರೆಸ್ ಸಮಿತಿಗಳಿಗೆ ಆದೇಶಿಸಿದ್ದು, ಈಗಾಗಲೇ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮತಗಟ್ಟೆ ಕಾರ್ಯಕರ್ತರು ಉತ್ಸಾಹದಿಂದ ತಮ್ಮ ಕಾರ್ಯವನ್ನು ಪೂರೈಸುತ್ತಿದ್ದಾರೆ ಎಂದರು.
ಜಿಲ್ಲಾ ಕಿಸಾನ್ ಕಾಂಗ್ರೆಸ್ ವಿಭಾಗದ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಸಾಂಸ್ಥಿಕ ಚುನಾವಣೆ ಪ್ರಗತಿಯಲ್ಲಿದ್ದು,ಈಗಾಗಲೇ ಚುನಾವಣಾ ವೇಳಾಪಟ್ಟಿ ಘೋಷಿಸಲಾಗಿದೆ. ಅದರಂತೆ ಕ್ರಿಯಾಶೀಲ ಕಾರ್ಯಕರ್ತರನ್ನು ಪ್ರತಿ ಮತಗಟ್ಟೆ ಮಟ್ಟದಲ್ಲಿ ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು, ಲೆಟರ್ ಹೆಡ್ ಸಂಸ್ಕೃತಿಯನ್ನು ಕಟ್ಟುನಿಟ್ಟಾಗಿ ತಡೆಹಿಡಿಯಲಾಗುವುದು ಎಂದರು.
ವೇದಿಕೆಯಲ್ಲಿ ಇನ್ನೋರ್ವ ಜಿಲ್ಲಾ ಕಾಂಗ್ರೆಸ್ ವೀಕ್ಷಕ, ಜಾಲಿ ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷ ರಹೀಮ್ ಶೇಖ್, ಕೆಪಿಸಿಸಿ ಸದಸ್ಯ ವಿನೋದ ನಾಯ್ಕ, ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರವಿ ಶೆಟ್ಟಿ ಕವಲಕ್ಕಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಮಹೇಶ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಿಕ್ರಿಯಾ ಶೇಖ್, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣಾ ಹರಿಜನ, ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕೆ.ಎಚ್.ಗೌಡ ಸೇರಿದಂತೆ ಇನ್ನೂ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.