ಸಿದ್ದಾಪುರ: ಕೆರೆ ಬೇಟೆ ವೇಳೆಯಲ್ಲಿ ಮೀನು ಸಿಗಲಿಲ್ಲ ಎಂದು ಕಮಿಟಿಯವರಿಗೆ ಮರಳಿ ಹಣ ನೀಡುವಂತೆ ಹಣ ನೀಡಿದವರು ಗಲಾಟೆ ನಡೆಸಿದ್ದು ಗಲಾಟೆ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಗೋಡಿನಲ್ಲಿ ನಡೆದಿದೆ.
ಲಾಠಿಚಾರ್ಜ ವೇಳೆ ಪೊಲೀಸರ ಮೇಲೆ ಜನರು ಮುಗಿಬಿದ್ದ ಕಲ್ಲು ತೂರಾಟ ಮಾಡಿದ್ದು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಕಲ್ಲು ತೂರಾಟದಿಂದ ಕೆಲವು ಪೊಲೀಸರಿಗೆ ಗಾಯಗಳಾಗಿದ್ದು ಸ್ಥಳದಲ್ಲಿ ಉದ್ರಿಕ್ತ ಸ್ಥಿತಿ ಉಂಟಾಗಿದ್ದು ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಸಿದ್ದಾಪುರ ತಾಲೂಕಿನ ಕಾನಗೋಡಿನಲ್ಲಿ ಮಾರಿಕಾಂಬ ದೇವಸ್ಥಾನದ ಕಮಿಟಿಯಿಂದ ಕೆರೆಯಲ್ಲಿ ಮೀನು ಹಿಡಿಯಲು ಸೇವೆ ರೂಪದಲ್ಲಿ ತಲೆಗೆ ₹600 ಹಣವನ್ನು ಕಮಿಟಿ ಪಡೆದಿತ್ತು.ಸುಮಾರು ಐದುಸಾವಿರಕ್ಕೂ ಹೆಚ್ಚು ಜನರು ಹಣ ನೀಡಿ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದರು.ಆದರೇ ಹೆಚ್ಚು ಜನರು ಸೇರಿದ್ದರಿಂದ ಮೀನು ಸಿಗದೇ ಕಮಿಟಿಯವರಲ್ಲಿ ಹಣ ಮರಳಿಸುವಂತೆ ಕೇಳಿದ್ದರು. ಆದರೆ ಕಮಿಟಿಯವರು ಹಣ ಮರಳಿಸಲು ನಿರಾಕರಿಸಿದ್ದು ,ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾದಾಗ ಜನರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ ಮಾಡಿದ್ದರು.
ಇದರಿಂದ ಕುಪಿತರಾದ ಜನರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದು ಹಲವು ಪೊಲೀಸರಿಗೆ ಗಾಯಗಳಾಗಿವೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.