ಶಿರಸಿ: ತಾಲೂಕಿನಲ್ಲಿ ನಳದ ನೀರು ಬಳಸುವವರಿಗಿಂತ ಬಾವಿ ನೀರಿಗೆ ಬಹು ಬೇಡಿಕೆ. ಅದರಲ್ಲೂ ವಿಶೇಷವಾಗಿ ಪ್ರತಿ ಮನೆ ಮನೆಗೂ ಒಂದು ನೀರಿನ ಬಾವಿ ಇದ್ದೆ ಇರುತ್ತದೆ. ಇನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೂಡ ಕೃಷಿ ಬಾವಿ ನೀಡಲಾಗುತ್ತಿದ್ದು 2021-22ನೇ ಸಾಲಿನಲ್ಲಿ 13 ಕೃಷಿಬಾವಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಉದ್ಯೋಗ ಖಾತ್ರಿ ಯೋಜನೆಯಡಿ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ಕೃಷಿ ಬಾವಿಯು ಪ್ರಮುಖ ಪಾತ್ರ ವಹಿಸುತ್ತದೆ. ಸುಮಾರು 1 ಲಕ್ಷ 28ಸಾವಿರ ವೆಚ್ಚದಲ್ಲಿ ಬಾವಿ ನಿರ್ಮಿಸಲಾಗುತ್ತಿದೆ. ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಹಾಗೂ ಮನೆ ಬಳಕೆಗೂ ಬಾವಿ ನೀರು ಉಪಯುಕ್ತವಾಗಿದೆ.
ಕೃಷಿ ಇಲಾಖೆಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಸಾಕಷ್ಟು ಕಾಮಗಾರಿಗಳನ್ನು ನೀಡುತ್ತಿದ್ದೇವೆ. ರೈತರಿಂದ ಕೃಷಿ ಬಾವಿಗೆ ಬೇಡಿಕೆಯಿದ್ದು, ಗ್ರಾಮ ಪಂಚಾಯತ್ ಮಟ್ಟದಲ್ಲಿ ಹೆಚ್ಚಿನ ಕಾಳಜಿ ವಹಿಸಿದರೆ ಸಾಧನೆ ಸಾಧ್ಯ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಮಧುಕರ ನಾಯ್ಕ ಅಭಿಪ್ರಾಯಪಟ್ಟರು.
ಇನ್ನು ಕೃಷಿ ಬಾವಿ ಮಹಿಳಾ ಫಲಾನುಭವಿ ಸರಸ್ವತಿ ಹೆಗಡೆ ಹೇಳುವಂತೆ ನಾವು 1 ಎಕರೆ ಜಮೀನು ಹೊಂದಿದ್ದು ಖಾತ್ರಿ ಯೋಜನೆಯಡಿ ಬಾವಿ ಪಡೆದು ಕೃಷಿ ಇಲಾಖೆಯಡಿ ಹನಿ ನೀರಾವರಿ ಪದ್ಧತಿಯನ್ನು ಕೈಗೊಳ್ಳಲು ಮುಂದಾಗಿದ್ದೇವೆ ಎಂದರು.
2021-22ರಲ್ಲಿ 13 ಕೃಷಿ ಬಾವಿ ಇದರಲ್ಲಿ 10 ಕಾಮಗಾರಿಗಳು ಪೂರ್ಣಗೊಂಡಿದ್ದು, ಇನ್ನೂ 3 ಪ್ರಗತಿಯಲ್ಲಿವೆ. ಪ್ರಸಕ್ತ ಸಾಲಿನಲ್ಲಿ 7 ಕೃಷಿ ಬಾವಿಗಳಿಗೆ ಬೇಡಿಕೆಯಿದ್ದು, ಈಗಾಗಲೇ 2 ಕಾಮಗಾರಿಗಳು ಚಾಲ್ತಿಯಲ್ಲಿವೆ. ಈ ಆರ್ಥಿಕ ವರ್ಷದಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ.