ಯಲ್ಲಾಪುರ: ಶೌಚಾಲಯಗಳು ಕೊರತೆ ಇರುವ ಪಟ್ಟಣದಲ್ಲಿ ಇರುವ ಶೌಚಾಲಯಗಳ ನಿರ್ವಹಣೆ ಇಲ್ಲದೆ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಅರಣ್ಯ ಇಲಾಖೆಯ ಗುತ್ತಿಗೆದಾರನ ತಪ್ಪು ಕೆಲಸದಿಂದಾಗಿ ದೇವಿ ಮೈದಾನ ಎದುರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸಾರ್ವಜನಿಕ ಶೌಚಾಲಯ ಮತ್ತೆ ಜನಸಾಮಾನ್ಯರ ಬಳಕೆಗೆ ಬಾರದಂತಾಗಿದೆ.
ಕಳೆದ ಕೆಲವು ವರ್ಷಗಳಿಂದ ಪಟ್ಟಣ ಪಂಚಾಯಿತಿಯ ನಿರ್ವಹಣೆ ಕೊರತೆ ಹಾಗೂ ಶೌಚಾಲಯದಲ್ಲಿ ಕದ್ದು ಸಾರಾಯಿ ಕುಡಿಯುವ ಜನರಿಂದಾಗಿ ಟಾಯ್ಲೆಟ್ ಸಾರ್ವಜನಿಕರ ಬಳಕೆಗೆ ಬಾರದೇ ಮುಚ್ಚಲಾಗಿತ್ತು. ನಂತರ ಸಾರ್ವಜನಿಕರ ಆಗ್ರಹದ ಮೇರೆಗೆ ಪಟ್ಟಣ ಪಂಚಾಯತಿಯವರು ನಿರ್ವಹಣೆ ಕಾರಣಕ್ಕೆ ಸಾರ್ವಜನಿಕ ಬಳಕೆಗೆ ಲಭ್ಯವಾಗಿತ್ತು. ಇದೀಗ ಶೌಚಾಲಯ ಪಕ್ಕದ ಅರಣ್ಯ ಇಲಾಖೆಯ ವಸತಿ ಗೃಹಗಳ ಎದುರು ದೊಡ್ಡ ಗಟಾರ್ ಕಟ್ಟಲಾಗಿದ್ದು, ಗಟಾರದಿಂದ ತೆಗೆದ ಮಣ್ಣನ್ನು ಶೌಚಾಲಯ ಎದುರು ಹಾಕಲಾಗಿದೆ.
ಶೌಚಾಲಯ ಪ್ರವೇಶಿಸುವವರು ಅದರಲ್ಲೂ ಮಹಿಳೆಯರ ಶೌಚಾಲಯಕ್ಕೆ ತೆರಳುವುದಕ್ಕೆ ತೊಂದರೆಯಾಗಿದೆ. ಸರಿಯಾಗಿ ನಿರ್ವಹಣೆ ಇಲ್ಲದೇ ಅಕ್ಕಪಕ್ಕದ ವ್ಯಾಪಾರಿಗಳಿಗೆ ದುರ್ವಾಸನೆಯಿಂದ ಕಳೆದ ಎರಡು ತಿಂಗಳಿಂದ ಶೌಚಾಲಯದ ಸಮಸ್ಯೆಯಾಗಿದೆ. ಅದರಲ್ಲಿಯೂ ಮಹಿಳೆಯರಿಗೆ ಬಳಸುವ ಶೌಚಾಲಯದ ಎದುರು ಹೆಚ್ಚು ಸಮಸ್ಯೆಯಾಗಿದೆ. ಪಟ್ಟಣ ಪಂಚಾಯತಿ ಅಥವಾ ಅರಣ್ಯ ಇಲಾಖೆಯ ಸಿವಿಲ್ ಗುತ್ತಿಗೆದಾರರು ಕೂಡಲೆ ಮಣ್ಣನ್ನು ತೆರವುಗೊಳಿಸಿ ಆಗಿರುವ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸ್ಥಳೀಯರಾದ ಮಹೇಶ ನಾಯ್ಕ, ವಿಜಯಶಂಕರ ನಾಯಕ, ಅಮೃತ ಬದ್ದಿ ಮುಂತಾದವರು ಆಗ್ರಹಿಸಿದ್ದಾರೆ.