ಶಿರಸಿ: ಕಿಬ್ಬಳ್ಳಿಯ ಶ್ರೀಮಹಾಗಣಪತಿ ಪ್ರೌಢಶಾಲೆಯಲ್ಲಿ ಕಳೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮ ಹಾಗೂ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ಹಾಗೂ ಪಟ್ಟಿ ಪೆನ್‍ಗಳ ವಿತರಣಾ ಕಾರ್ಯಕ್ರಮ ಆಡಳಿತ ಸಮಿತಿ ಹಾಗೂ ಪ್ರಾಯೋಜಕರ ಸಮ್ಮುಖದಲ್ಲಿ ನೆರವೇರಿತು.
ಕಳೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 621 ಅಂಕ ಗಳಿಸಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದ ಆದಿತ್ಯ ಹೆಗಡೆ ಶಿರಗೋಡಬೈಲ್ ಇವನಿಗೆ ಪಾಲಕರ ಜೊತೆಯಲ್ಲಿ ಅಭಿನಂದಿಸಲಾಯಿತು. ಶಾಲೆಗೆ ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನ ಗಳಿಸಿದ ಪನ್ನಗ ಎಸ್.ಹೆಗಡೆ ಕಿಬ್ಬಳ್ಳಿ ಹಾಗೂ ಹರೀಶ್ ಎಸ್.ಹೆಗಡೆ ಶಿರಗೋಡಬೈಲ್ ಇವರುಗಳನ್ನು ಈ ಸಂದರ್ಭದಲ್ಲಿ ಪಾಲಕರ ಜೊತೆ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಶೀಲಾ ಹೆಗಡೆ ಹರ್ತೆಬೈಲ್ ಇವರ ಪ್ರಾಯೋಜಕತ್ವದಲ್ಲಿ ಶಾಲಾ ಮಕ್ಕಳಿಗೆ ಉಚಿತ ಪಟ್ಟಿ- ಪೆನ್ನು ಸಹ ವಿತರಿಸಲಾಯಿತು. ವಿಶ್ವೇಶ್ವರ ಹೆಗಡೆ ಹರ್ತೆಬೈಲ್ ಅವುಗಳನ್ನು ವಿತರಿಸಿದರು.
ಶಾಲಾ ಸಹ ಶಿಕ್ಷಕಿ ಅನಿತಾ ಬಿ.ಶಿರ್ಸಿಕರ್ ಅವರ ಪ್ರಾಯೋಜಕತ್ವದಲ್ಲಿ 8ನೇ ತರಗತಿ ಮಕ್ಕಳಿಗೆ ಬ್ಯಾಗ್ ವಿತರಣೆ ಸಹ ನಡೆಯಿತು. ಇದೇ ಸಂದರ್ಭದಲ್ಲಿ ಪ್ರೌಢಶಾಲೆಯಲ್ಲಿ ಸಂಸ್ಕೃತ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಜಿ.ಟಿ.ಭಟ್ ಹಾಗೂ ಇಂಗ್ಲೀಷ್ ಗೌರವ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದ ಶ್ವೇತಾ ದೊಡ್ಮನಿ ಅವರನ್ನು ಪ್ರೌಢಶಾಲೆ, ಆಡಳಿತ ಮಂಡಳಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ನಾಗಪತಿ ಭಟ್ ಮಿಳಗಾರ ವಹಿಸಿದ್ದರೆ, ಕಾರ್ಯದರ್ಶಿ ಜಿ.ಎಮ್ ಹೆಗಡೆ ಹೆಗ್ನೂರು, ಉಪಾಧ್ಯಕ್ಷ ಶಂಕರ ಡಿ.ಹೆಗಡೆ ಶಿರಗೋಡಬೈಲ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗಪತಿ ಹೆಗಡೆ ಹರ್ತೆಬೈಲ್ ಹಾಗೂ ಶಾಲಾ ಮುಖ್ಯ ಶಿಕ್ಷಕ ಜಿ.ವಿ.ಹೆಗಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹ ಶಿಕ್ಷಕ ಶ್ರೀಧರ ಹೆಗಡೆ ಅಭಿನಂದನಾ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸಹ ಶಿಕ್ಷಕ ಶಿವಾನಂದ ಮೋಟವ್ವನವರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.