ಕಾರವಾರ: ಕಟ್ಟಡ ನಿರ್ಮಾಣ ಕಾರ್ಮಿಕರ ಪ್ರಮುಖ ಬೇಡಿಕೆಗಳಾದ ಕಟ್ಟಡ ಕಾರ್ಮಿಕ ಕಾನೂನು ಹಾಗೂ ಸೆಸ್ ಕಾನೂನು 1996 ಪುನರ್ ಸ್ಥಾಪಿಸಬೇಕು. ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಗಳ ರಕ್ಷಿಸಬೇಕು. ಕಿಟ್ ಬೇಡ, ನೇರ ನಗದು ಜಮಾ ಮಾಡಿ. ಕಲ್ಯಾಣ ಮಂಡಳಿಯ ಎಲ್ಲಾ ಘೋಷಿತ ಸೌಲಭ್ಯಗಳ ಜಾರಿಗಾಗಿ. ಕಳೆದ ಐದಾರು ವರ್ಷಗಳಿಂದ ಬಾಕಿಯಿರುವ ಅರ್ಜಿಗಳ ಸೌಲಭ್ಯಗಳನ್ನು ಕೂಡಲೇ ಬಿಡುಗಡೆ ಮಾಡಿ. ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಿ. ಕೋವಿಡ್-19ರ ಹೆಸರಲ್ಲಿ ನಡೆದಿರುವ ಎಲ್ಲ ಖರೀದಿಗಳ ತನಿಖೆಗೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ 3ನೇ ಸಮ್ಮೇಳನವನ್ನು ಯಲ್ಲಾಪುರದ ಅಡಿಕೆ ಭವನದಲ್ಲಿ ಮೇ 31ರಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ.) ಜಿಲ್ಲಾ ಸಮಿತಿ ಸಂಘಟಿಸಿದೆ.
ಜಿಲ್ಲಾ ಸಮ್ಮೇಳನವನ್ನು ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೇ. ಮಹಾಂತೇಶ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಸಮಿತಿ ಅಧ್ಯಕ್ಷ ಶಾಂತಾರಾಮ ನಾಯಕ ವಹಿಸಲಿದ್ದಾರೆ.
ಕೋವಿಡ್-19ರ ಪರಿಣಾಮ ಲಾಕ್ಡೌನ್ನಿಂದ ಕಳೆದ 2 ವರ್ಷಗಳಿಂದ ಕಾರ್ಮಿಕರಿಗೆ ಕೆಲಸ ಸರಿಯಾಗಿ ಸಿಗದೇ ಸಂಕಷ್ಟದಲ್ಲಿದ್ದಾರೆ. ಈಗ ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆ ಕೆಲಸಕ್ಕೆ ಕತ್ತರಿ ಹಾಕಿದೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ಬಡ ಕಾರ್ಮಿಕರ ನೆರವಿಗೆ ದೊಡ್ಡ ಮಟ್ಟದಲ್ಲಿ ಬರಬೇಕಿತ್ತು. ಆದರೆ ಜಿಲ್ಲೆಯ ಹಲವಾರು ತಾಲೂಕುಗಳಲ್ಲಿ ವಿವಿಧ ಕಿಟ್ಗಳು ಬಂದರೂ ಎಲ್ಲಾ ಕಾರ್ಮಿಕರಿಗೆ ತಲುಪಿಲ್ಲ. ಕೋವಿಡ್ ಪರಿಹಾರ ರೂ.5000 ಮತ್ತು ರೂ.3000 ಸದರಿ ನೋಂದಾಯಿತ ಎಲ್ಲ ಕಾರ್ಮಿಕರಿಗೆ ಸಿಕ್ಕಿಲ್ಲ. ಕಿಟ್ಗಳ ಬದಲು ನೇರ ನಗದು ವರ್ಗಾವಣೆಗೆ ಸಂಘ ಒತ್ತಾಯಿಸುತ್ತದೆ.
ಈ ಹಿನ್ನೆಲೆಯಲ್ಲಿ ಕಾರ್ಮಿಕರ ಹಕ್ಕುಗಳನ್ನು ಉಳಿಸಿಕೊಳ್ಳಲು, ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ಎಲ್ಲ ಕಾರ್ಮಿಕರು ಒಗ್ಗಟ್ಟಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ರಾಜ್ಯ ಸಮ್ಮೇಳನ ಜೂನ್ 26, 27ರಂದು ತುಮಕೂರಿನಲ್ಲಿ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಉತ್ತರ ಕನ್ನಡ ಜಿಲ್ಲಾ ಸಮ್ಮೇಳನವನ್ನು ಮೇ 31ರಂದು ಬೆಳಿಗ್ಗೆ 10.30ಕ್ಕೆ ಯಲ್ಲಾಪುರದ ಅಡಿಕೆ ಭವನದಲ್ಲಿ ಸಂಘಟಿಸಲಾಗಿದೆ. ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಹಾಜರಾಗಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿ ಜಿಲ್ಲಾ ಸಮಿತಿ ಅಧ್ಯಕ್ಷ ಶಾಂತಾರಾಮ ನಾಯಕ ಮತ್ತು ಕಾರ್ಯದರ್ಶಿ ತಿಲಕ ಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.