ದಾಂಡೇಲಿ: ನಗರದ ಬಸ್ ನಿಲ್ದಾಣದಲ್ಲಿ ಬಸ್ಸುಗಳ ಓಡಾಟಕ್ಕೆ ತೊಂದರೆಯಾಗುವಂತೆ ದ್ವಿಚಕ್ರ ವಾಹನವನ್ನು ನಿಲುಗಡೆ ಮಾಡಿರುವುದನ್ನು ಪ್ರಶ್ನಿಸಿ, ಬುದ್ಧಿಮಾತು ಹೇಳಿದ ಸಾರಿಗೆ ಸಂಸ್ಥೆಯ ಮೇಲ್ವಿಚಾರಕನ ಮೇಲೆ ಮೂವರು ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈಯ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಒಂದು ದ್ವಿಚಕ್ರ ವಾಹನದಲ್ಲಿ ಬಂದ ಮೂವರು ನಗರದ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ಸುಗಳಿಗೆ ಅಡಚಣೆಯಾಗುವಂತೆ ತಮ್ಮ ದ್ವಿಚಕ್ರ ವಾಹನವನ್ನು ನಿಲ್ಲಿಸಿರುವುದನ್ನು ಸಾರಿಗೆ ಸಂಸ್ಥೆಯ ಮೇಲ್ವಿಚಾರಕ ಮಲ್ಲಿಕಾರ್ಜುನ ದಾಸಪ್ಪನವರ ಅವರು ಪ್ರಶ್ನಿಸಿ, ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುವಂತೆ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅಪರಿಚಿತರಾದ ಮೂವರು ಏಕಾಏಕಿ ಅವಾಚ್ಯ ಶಬ್ದಗಳಿಂದ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಜೀವ ಬೆದರಿಕೆ ಒಡ್ಡಿದ್ದಾರೆಂದು ಮಲ್ಲಿಕಾರ್ಜುನ್ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ನಗರ ಠಾಣೆಯ ಪೊಲೀಸರು ದೂರು ಸ್ವೀಕರಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.