ಯಲ್ಲಾಪುರ:ರಾಷ್ಟ್ರೀಯ ಆಯುಷ್ ಅಭಿಯಾನ ಯೋಜನೆ ಅಡಿಯಲ್ಲಿ ಆಯುರ್ವೇದ ಕ್ಷೇಮ ಕೇಂದ್ರ ಉಮ್ಮಚ್ಗಿ ಇವರ ಸಹಯೋಗದಲ್ಲಿ, ಜಿಲ್ಲಾ ಪಂಚಾಯತಿ, ಆಯುಷ್ ಇಲಾಖೆ, ಉಮ್ಮಚ್ಗಿ ಗ್ರಾ.ಪಂ. ವ್ಯಾಪ್ತಿಯ ಬಾಳೆಗದ್ದೆಯಲ್ಲಿ ನಡೆದ ಆರೋಗ್ಯ ಮಾಹಿತಿ ಮತ್ತು ತಪಾಸಣಾ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಮ್ಮಚಗಿ ಆಯುರ್ವೇದ ಆಸ್ಪತ್ರೆಯ ವೈದ್ಯ ಡಾ.ಯೋಗೀಶ ಮಡಗಾಂವ್ಕರ್ ದೇಹದ ಸ್ವಚ್ಛತೆಯಿಂದ ನಮಗೆ ಬರುವ ಅನೇಕ ರೋಗಗಳನ್ನು ತಡೆಯಬಹುದು. ಹೀಗಾಗಿ ಎಲ್ಲರೂ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಕೊಡಬೇಕು ಎಂದು ಹೇಳಿದರು.
ಹೆಣ್ಣು ಮಕ್ಕಳು ಋತುಚಕ್ರದ ವ್ಯತ್ಯಯದ ಬಗ್ಗೆ ಗಾಬರಿಯಾಗಬಾರದು. ವೈದ್ಯರ ಬಳಿ ಬಂದರೆ ಸೂಕ್ತ ಪರಿಹಾರ ಲಭಿಸುತ್ತದೆ. ಯಾವ ತೊಂದರೆಗಳನ್ನೂ ಮುಚ್ಚಿಟ್ಟುಕೊಳ್ಳುವುದು ಒಳ್ಳೆಯದಲ್ಲ ಎಂದ ಅವರು, ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಉತ್ತಮವಾದ ಆಹಾರವನ್ನು ಸೇವಿಸಬೇಕು. ಅಡುಗೆಯಲ್ಲಿ ಆಯಾಯ ಕಾಲಕ್ಕೆ ಸಿಗುವ ಪದಾರ್ಥ ಹಣ್ಣು ಹಂಪಲುಗಳನ್ನೇ ಹೆಚ್ಚಾಗಿ ಸೇವಿಸಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಉಮ್ಮಚ್ಗಿ ಗ್ರಾ.ಪಂ. ಸ್ಥಳೀಯ ಸದಸ್ಯ ಗ.ರಾ.ಭಟ್ಟ, ಗ್ರಾಮದ ಪ್ರಮುಖರಾದ ಸುಕ್ರು ಗೌರಯ್ಯ ಪಟಗಾರ, ಗಣಪತಿ ರಾಮಾ ಮೊಗೇರ, ಸಹದೇವ ಮಾಬ್ಲೇಶ್ವರ ಪಟಗಾರ ಇದ್ದರು. ಆಶಾ ಕಾರ್ಯಕರ್ತೆ ನಾಗವೇಣಿ ಪಟಗಾರ ಸ್ವಾಗತಿಸಿ ವಂದಿಸಿದರು. ನಂತರ ನಡೆದ ಆರೋಗ್ಯ ತಪಾಸಣೆಯಲ್ಲಿ 25ಕ್ಕೂ ಹೆಚ್ಚು ಗ್ರಾಮಸ್ಥರ ರಕ್ತದೊತ್ತಡ ಮತ್ತು ಮಧುಮೇಹದ ಪರೀಕ್ಷೆ ಮಾಡಲಾಯಿತು. ಆಯುರ್ವೇದ ಸೋಪ್, ತೈಲ ಮತ್ತು ಔಷಧ ವಿತರಿಸಲಾಯಿತು.