ದಾಂಡೇಲಿ: ನಗರದ ಎಲ್ಲ ಸ್ತರಗಳ ಜನರಿಗೆ ಮತ್ತು ಬಹುತೇಕ ಎಲ್ಲ ಕ್ಷೇತ್ರಗಳಿಗೆ ಮಾರಕವಾಗಿ ಪರಿಣಮಿಸಿರುವ ಯುಜಿಡಿ ಕಾಮಗಾರಿ ಸದ್ಯ ಶಾಲಾ- ಕಾಲೇಜುಗಳಿಗೂ ಮಾರಕವಾಗತೊಡಗಿದೆ. ನಗರದ ಹಳೆದಾಂಡೇಲಿಯಲ್ಲಿ ನಡೆಯುತ್ತಿರುವ ಯುಜಿಡಿ ಕಾಮಗಾರಿಯಿಂದಾಗಿ ಅಲ್ಲಿಯ ಸರಕಾರಿ ಪಿಯು ಮತ್ತು ಪ್ರೌಢಶಾಲೆಯ ಆಟದ ಮೈದಾನಕ್ಕೆ ತೀವ್ರ ಹಾನಿಯಾಗಿದೆ.
ಯುಜಿಡಿ ಪೈಪ್ ಲೈನ್ ನಿಂದಾಗಿ ಬೃಹತ್ ಪ್ರಮಾಣದಲ್ಲಿ ರಸ್ತೆ ಅಗೆಯಲಾಗುತ್ತಿದ್ದು, ಅಗೆದ ಮಣ್ಣು ಆಟದ ಮೈದಾನವನ್ನು ಆವರಿಸಿಕೊಂಡಿದೆ. ಇದರ ನಡುವೆ ರಸ್ತೆ ಅಗೆಯುವ ಸಂದರ್ಭದಲ್ಲಿ ಬರುತ್ತಿರುವ ನೀರನ್ನು ಪೈಪ್ ಮೂಲಕ ನೇರವಾಗಿ ಆಟದ ಮೈದಾನಕ್ಕೆ ಬಿಡಲಾಗುತ್ತಿರುವುದರಿಂದ ಆಟದ ಮೈದಾನ ಕೆಸರು ಗದ್ದೆಯಾಗಿ ಹೊಂಡ ಗುಂಡಿಗಳು ನಿರ್ಮಾಣವಾಗಿದೆ. ಇದರ ಹೊರತಾಗಿಯೂ ಆಟದ ಮೈದಾನಕ್ಕೆ ತಕ್ಕಮಟ್ಟಿಗೆ ಇದ್ದಂತಹ ಆವರಣ ಗೋಡೆಗೂ ಹಾನಿಯಾಗಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಯುಜಿಡಿ ಗುತ್ತಿಗೆ ಸಂಸ್ಥೆಯವರು ಸರಕಾರಿ ಪಿಯು ಕಾಲೇಜಿಗಾಗಲೀ, ಸರಕಾರಿ ಪ್ರೌಢಶಾಲೆಗಾಗಲೀ ಯಾವುದೇ ಮಾಹಿತಿ ನೀಡದೇ ಕೆಸರು ನೀರನ್ನು ಆಟದ ಮೈದಾನಕ್ಕೆ ಬಿಟ್ಟಿರುವುದನ್ನು ಗಮನಿಸಬಹುದು. ಸಂಬಂಧಪಟ್ಟ ಶಾಲಾ- ಕಾಲೇಜಿನ ಮುಖ್ಯಸ್ಥರ ಗಮನಕ್ಕೆ ತರದೆ ಆಟದ ಮೈದಾನವನ್ನು ಹಾಳುಗೆಡವಿದ ಯುಜಿಡಿ ಗುತ್ತಿಗೆ ಸಂಸ್ಥೆಗೆ ಇರುವಂತಹ ಶೈಕ್ಷಣಿಕ ಕಾಳಜಿ ಮತ್ತು ಸಾಮಾಜಿಕ ಕಾಳಜಿಯನ್ನು ಪ್ರಶ್ನಿಸುವಂತಾಗಿದೆ. ಹಾಳುಗೆಡವಿದ ಆಟದ ಮೈದಾನವನ್ನು ದುರಸ್ತಿಗೊಳಿಸುವಂತೆ ಸರಕಾರಿ ಪಿಯು ಕಾಲೇಜಿನ ಪ್ರಾಚಾರ್ಯೆ ನಾಗರೇಖಾ ಗಾಂವಕರ ಮತ್ತು ಪ್ರೌಢಶಾಲೆಯ ಮುಖ್ಯೋಪಾಧ್ಯಯಿನಿ ಜಯ ನಾಯ್ಕ ಅವರು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.