ಭಟ್ಕಳ: ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡತನ ರೇಖೆಗಿಂತ ಕೆಳಗಿರುವ (ಬಿ.ಪಿ.ಎಲ್) ಕುಟುಂಬಗಳ ಗೃಹ ವಿದ್ಯುತ್ ಬಳಕೆದಾರರಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಬಳಕೆದಾರರನ್ನು ಒಳಗೊಂಡಂತೆ ಮಾಸಿಕ 75 ಯುನಿಟ್‌ಗಳವರೆಗೆ ಮೇ 01ರಿಂದ ಅನ್ವಯವಾಗುವಂತೆ ಉಚಿತ ವಿದ್ಯುತ್ ಸರಬರಾಜು ಮಾಡಲು ಆದೇಶಿಸಿದೆ ಎಂದು ಹೆಸ್ಕಾಂ ಭಟ್ಕಳ ಕಾರ್ಯ ಮತ್ತು ಪಾಲನಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ (ವಿ) ತಿಳಿಸಿದ್ದಾರೆ.
ಈ ಸೌಲಭ್ಯವನ್ನು ಪಡೆಯಲು ಬಿಪಿಎಲ್ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರದ ದೃಢೀಕೃತ ದಾಖಲೆಯನ್ನು (ಆರ್.ಡಿ ನಂ) ಒದಗಿಸಬೇಕು. ಮಾಸಿಕ ವಿದ್ಯುತ್ ಬಳಕೆಯ ಮಿತಿಯು 75 ಯುನಿಟ್‌ಗಳನ್ನು ಮೀರಿದ್ದಲ್ಲಿ ಸದರಿ ಗ್ರಾಹಕರುಗಳಿಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ನಿಗದಿಪಡಿಸುವ ದರದ ಆದೇಶದಂತೆ ಮಾಸಿಕ ಪೂರ್ಣ ಬಳಕೆಗೆ ಎಲ್ ಟಿ-2(ಎ) ಜಕಾತಿ ಪ್ರಕಾರ ಬಿಲ್ ಮಾಡಲಾಗುತ್ತದೆ. ಸದರಿ ಮೊತ್ತವನ್ನು ಗ್ರಾಹಕರೇ ಪಾವತಿಸಬೇಕಾಗುತ್ತದೆ. ಈ ಸೌಲಭ್ಯಕ್ಕೆ ಅರ್ಹರಾಗುವ ಈ ವರ್ಗದ ವಿದ್ಯುತ್ ಗ್ರಾಹರುಗಳು ಮಾಸಿಕ ವಿದ್ಯುತ್ ಬಿಲ್ಲನ್ನು ಸಂಪೂರ್ಣವಾಗಿ ನಿಗದಿತ ಅವಧಿಯೊಳಗೆ ಪಾವತಿಸಿದ ನಂತರ, ಸದರಿ ಗ್ರಾಹಕರುಗಳಿಗೆ ಡಿಬಿಟಿ ಯೋಜನೆಯ ವ್ಯವಸ್ಥೆಯಡಿ ಸರ್ಕಾರದಿಂದ ಸಹಾಯಧನವನ್ನು ನೀಡುವ ಮುಖಾಂತರ ಮರು ಪಾವತಿಸಲಾಗುತ್ತದೆ.
ಈ ಪ್ರವರ್ಗದ ವಿದ್ಯುತ್ ಗ್ರಾಹಕರು ವಿದ್ಯುತ್ ಸರಬರಾಜು ಕಂಪನಿಗಳಿಗೆ ಬ್ಯಾಂಕ್ ಖಾತೆಯ ಸಂಖ್ಯೆ ಹಾಗೂ ನೇರವಾಗಿ ಸರ್ಕಾರದಿಂದ ನೀಡುವ ಸಹಾಯಧನವನ್ನು ಜಮಾ ಮಾಡಲಾಗುತ್ತದೆ. ಈ ಪ್ರವರ್ಗದ ವಿದ್ಯುತ್ ಗ್ರಾಹಕರುಗಳು ಮೇ 30ರ ಅಂತ್ಯಕ್ಕೆ ಇರುವ ಬಾಕಿ ವಿದ್ಯುತ್ ಶುಲ್ಕದ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.