
ಮುಂಡಗೋಡ: ತಾಲೂಕಿನಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ವಿವಿಧ ಕಡೆಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ, ಜಲಾಶಯದ ಕಾಲುವೆಗಳು ಒಡೆದು ಮನೆಗೆ ನೀರು ನುಗ್ಗಿವೆ, ಕೆಲವು ಕೆರೆ ಕಟ್ಟೆಗಳು ಒಡ್ಡು ಒಡೆದು ತೋಟಗಳಿಗೆ, ಗದ್ದೆಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿವೆ, ತಾಲೂಕಿನಲ್ಲಿ ಸುಮಾರು ಕೊಟ್ಟಿಗೆ ಮನೆ ಸೇರಿ 21 ಮನೆಗಳಿಗೆ ಹಾನಿಯಾಗಿವೆ.
2019ರಲ್ಲಿ ನೆರೆಹಾವಳಿಯಿಂದ ಸ್ಥಳಾಂತರಗೊಂಡಿದ್ದ ಯರೇಬೈಲ್ ಗ್ರಾಮದ ಹತ್ತಿರ ಈ ಸಲವೂ ಮಳೆಯ ನೀರು ಉಕ್ಕಿ ಹರಿಯುತ್ತಿದೆ. ಗ್ರಾಮದ ಕೆಳಗಡೆ ಭಾಗದಲ್ಲಿ ರೈತರು ಹಾಕಿದ್ದ ಭತ್ತದ ಬಣವೆ, ಕೊಟ್ಟಿಗೆಯು ನೀರಿನಲ್ಲಿ ತೇಲಿ ಹೋಗಿದೆ. ತಹಶೀಲ್ದಾರ್ ಶ್ರೀಧರ ಮುಂದಲಮನಿ ಹಾಗೂ ಸಿಬ್ಬಂದಿ ಯರೇಬೈಲ್ ಗ್ರಾಮಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿದರು. ಅಗತ್ಯಬಿದ್ದರೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ತಾಲೂಕಿನ ಇಲಾಖೆಯ ಅಧಿಕಾರಿಗಳಿU,É ಸಿಬ್ಬಂದಿಗಳಿಗೆ ತಹಶೀಲ್ದಾರ ಸೂಚನೆ ನೀಡಿದ್ದಾರೆ.
ತಾಲೂಕಿನಲ್ಲಿ ರಸ್ತೆ ಸಂಪರ್ಕ ಕಡಿತ: ನಂದಿಕಟ್ಟಾ ದಿಂದ ಯರೇಬೈಲ್ ಹೋಗುವ ರಸ್ತೆ, ಕ್ಯಾಸನಕೇರಿ ಚವಡಳ್ಳಿ ರಸ್ತೆ, ಮುಡಸಾಲಿಯಿಂದ ಕಾತೂರ ಹೋಗುವ ರಸ್ತೆ, ಮುಂಡಗೋಡದಿಂದ ಇಂದೂರ ಹೋಗುವ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ಹರಿಯುತ್ತಿರುವುದರಿಂದ ರಸ್ತೆ, ಮಳಗಿಯಿಂದ ಬದನಗೌಡ್ ಹೋಗುತ್ತಿರುವ ರಸ್ತೆ, ಕಲಘಟಗಿ ರಸ್ತೆಯ ಅಗಡಿ ಗ್ರಾಮದಿಂದ ಸೇಲಂ ನಗರಕ್ಕೆ ಬರುವ ರಸ್ತೆ, ಕಲ್ಲಕ್ಕಲ ಮಂತ್ತಗಿ ರಸ್ತೆಗಳು ನಿರಂತರ ಮಳೆಯಿಂದ ಸಂಪರ್ಕ ಕಡಿತಗೊಂಡಿವೆ.
ಮಳೆಯಿಂದ ಹಾನಿಯಾದ ಮನೆಗಳು: ಹುನಗುದ ಗ್ರಾಮದಲ್ಲಿ 3, ಪಟ್ಟಣದಲ್ಲಿ 1, ಇಂದೂರ ಗ್ರಾಮದಲ್ಲಿ 2, ಉಗ್ಗಿನಕೇರಿ ಗ್ರಾಮದಲ್ಲಿ 1, ಕಲಕೇರಿ ಗ್ರಾಮದಲ್ಲಿ 1, ಲಕ್ಕೋಳ್ಳಿ ಗ್ರಾಮದಲ್ಲಿ 1, ಕ್ಯಾಸಿನಕೇರಿ ಗ್ರಾಮದಲ್ಲಿ 1, ತಟ್ಟಿಹಳ್ಳಿ ಗ್ರಾಮದಲ್ಲಿ 1, ಚವಡಳಿ ಗ್ರಾಮದಲ್ಲಿ ್ಳ 1, ನ್ಯಾಸರ್ಗಿ ಗ್ರಾಮದಲ್ಲಿ 2, ಸನವಳ್ಳಿ ಗ್ರಾಮದಲ್ಲಿ 3, ಮಳಗಿ ಗ್ರಾಮದಲ್ಲಿ 1, ಪಾಳಾ ಗ್ರಾಮದಲ್ಲಿ 1, ಭದ್ರಾಪುರ ಗ್ರಾಮದಲ್ಲಿ 1, ಹಾಗೂ ಕಾತೂರ ಗ್ರಾಮದಲ್ಲಿ 1 ಕೊಟ್ಟಿಗೆ ಮನೆ ಸೇರಿ ಒಟ್ಟು 21 ಮನೆಗಳಿಗೆ ಹಾನಿಯಾಗಿದೆ. ಹಾಗೂ ಪಟ್ಟಣದ ಹಳೂರ ಶಾಲೆಯ ಗೋಡೆ ಕುಸಿದು ಹಾನಿಯಾಗಿದೆ.
ಇಂದೂರ ಗ್ರಾಮದಲ್ಲಿ ಬಾಚಣಕಿ ಜಲಾಶಯದ ಕಾಲುವೆಯ ಮೂಲಕ ಹೆಚ್ಚುವರಿ ನೀರು ಹರಿದುಬರುತ್ತಿದ್ದು, ಗ್ರಾಮದೊಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಆತಂಕಗೊಂಡಿದ್ದಾರೆ.
ಮಳಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೊಳಗಿ ಗ್ರಾಮದಲ್ಲಿ ಕೆರೆಯ ಒಡ್ಡು ಕುಸಿದು ಅಪಾರ ಪ್ರಮಾಣದಲ್ಲಿ ನೀರು ಬೆಳೆಗೆ ನುಗ್ಗಿದೆ. ಭತ್ತದ ಸಸಿಗಳು ಕೊಚ್ಚಿಕೊಂಡು ಹೋಗಿವೆ ಎಂದು ರೈತರು ದೂರಿದ್ದಾರೆ. ಜನರು ಮನೆಯಿಂದ ಹೊರಬರುವಾಗ ಅಗತ್ಯ ಮಾಹಿತಿ ತಿಳಿದುಕೊಂಡು ಸಂಚರಿಸಬೇಕು ಎಂದು ತಹಶೀಲ್ದಾರ್ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ.
2019ರಲ್ಲಿ ಸುರಿದಿದ್ದ ಮಳೆಯ ಘಟನೆಯನ್ನು ಮತ್ತೊಮ್ಮೆ ನೆನಪಿಸುವಂತೆ ಮಳೆರಾಯ ಆರ್ಭಟಿಸುತ್ತಿದ್ದಾನೆ.