ಭಟ್ಕಳ: ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದಾಗಿ ಹೇಳಿಕೊಳ್ಳುತ್ತಿರುವವರು ಮೊದಲು ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಜನರ ಮುಂದಿಡಲಿ. ಅದರಲ್ಲಿ ದಲಿತ, ಹಿಂದೂಳಿದ ವರ್ಗಗಳ, ಅಲ್ಪಸಂಖ್ಯಾತರ, ಆದಿವಾಸಿಗಳ, ಮಹಿಳೆಯರ ಸ್ಥಾನಮಾನಗಳೇನಾಗಿರುವುದು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಡಾ.ಖಾಸೀಂ ರಸೂಲ್ ಇಲಿಯಾಸ್ ಹೇಳಿದರು.
ಅವರು ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿ, ದೇಶದ ಸಂವಿಧಾನಕ್ಕಿಂತ ಉತ್ತಮವಾದ ಸಂವಿಧಾನವನ್ನು ತರಲು ಸಾಧ್ಯವಾದರೆ ಅದನ್ನು ಜನರಿಗೆ ಸ್ಪಷ್ಟಪಡಿಸಿ . ಆ ಹಿಂದೂ ರಾಷ್ಟ್ರದಲ್ಲಿ ದಲಿತರ ಸ್ಥಾನವನ್ನು ಜನರಿಗೆ ತಿಳಿಸಿ. ಮಹಿಳೆಯರು, ಆದಿವಾಸಿಗಳು, ಸಮಾಜದ ತುಳಿತಕ್ಕೊಳಗಾದ ಜನರ ಮತ್ತು ಅಲ್ಪಸಂಖ್ಯಾತರ ಸ್ಥಾನವೇನು? ಎಂಬುದನ್ನು ಅವರು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
ಸಕಾರಾತ್ಮಕ ಅಜೆಂಡಾ ಇಲ್ಲದವರು ದೇಶವನ್ನು ವಿನಾಶದ ಹಾದಿಗೆ ತಳ್ಳುತ್ತಿದ್ದಾರೆ. ದೇಶ ಇಂದು ಸಾಗುತ್ತಿರುವ ಹಾದಿಯನ್ನು ತಡೆಯದಿದ್ದರೆ ಅಥವಾ ದಿಕ್ಕನ್ನು ಬದಲಿಸುವ ಪ್ರಯತ್ನ ಮಾಡದಿದ್ದರೆ ಸ್ವಾತಂತ್ರ್ಯಾನಂತರ ಈ ದೇಶ ದುರ್ಗತಿಯನ್ನು ಕಾಣಬಹುದು. ದೇಶದ ವಿರುದ್ಧ ನಡೆಯುತ್ತಿರುವ ದಬ್ಬಾಳಿಕೆಯನ್ನು ಮಟ್ಟಹಾಕಲು ಇಲ್ಲಿನ ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಹಿಂದುಳಿದವರು ಎದ್ದುನಿಲ್ಲಬೇಕು ಎಂದು ಅವರು ಕರೆ ನೀಡಿದರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಡಾ.ನಸೀಂಖಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯಂ ಆರ್ಮುಗಂ, ರಾಜ್ಯಾಧ್ಯಕ್ಷ ತಾಹಿರ್ ಹುಸೇನ್, ಉಪಾಧ್ಯಕ್ಷ ಶ್ರೀಕಾಂತ ಸಾಲಿಯಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಇಂಜಿನಿಯರ್ ಹಬೀಬುಲ್ಲಾ ಸಾರ್ವಜನಿಕರನ್ನುದ್ದೇಶಿ ಮಾತನಾಡಿದರು.
ಖಮರುದ್ದೀನ್ ಮಷಾಯಿಖ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಅಂತ್ಯದಲ್ಲಿ ಅಬ್ದುಲ್ ಮಜೀದ್ ಕೋಲ ಧನ್ಯವಾದಗೈದರು. ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಮೌಲಾನ ಅಬ್ದುಲ್ ಅಲೀಮ್ ಖಾಸ್ಮಿ, ಭಟ್ಕಳ ತಂಝೀಮ್ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಪರ್ವಾಜ್, ಭಟ್ಕಳ ಮುಸ್ಲಿಮ್ ಯುತ್ ಫೆಡರೇಷನ್ ಅಧ್ಯಕ್ಷ ಅಝೀಝುರೇಮಾನ್ ರುಕ್ನುದ್ದೀನ್ ನದ್ವಿ, ಸಮಾಜ ಸೇವಕ ಸೈಯ್ಯದ್ ಹಸನ್ ಬರ್ಮಾವರ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೋಟ್…
ನಾವು ಯಾವುದೇ ಕಾರಣಕ್ಕೂ ನಮ್ಮ ಸ್ವಂತಿಕೆಯನ್ನು ಬಿಟ್ಟುಕೊಡುವುದಿಲ್ಲ. ಹಿಜಾಜ್, ವೈಯಕ್ತಿಕ ಕಾನೂನು, ಧರ್ಮ, ನಾಗರೀಕತೆ ಇವುಗಳನ್ನು ಪಾಲಿಸುವುದರ ಜೊತೆಗೆ ನಾವು ನಮ್ಮ ಗುರುತಿನೊಂದಿಗೆ ಜೀವಿಸುತ್ತೇವೆ.– ಡಾ.ಖಾಸೀಂ ರಸೂಲ್ ಇಲಿಯಾಸ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ