ದಾಂಡೇಲಿ: ನಗರದ ಸಮೀಪದಲ್ಲಿರುವ ಕೋಗಿಲಬನ ಗ್ರಾಮದಲ್ಲಿ ಕಳೆದ ಅನೇಕ ವರ್ಷಗಳಿಂದಿರುವ ಬಯಲು ರುದ್ರಭೂಮಿಗೆ ಇದೀಗ ಆಧುನಿಕ ಸ್ಪರ್ಷವನ್ನು ನೀಡಿ, ಸುಸಜ್ಜಿತ ಹಿಂದೂ ರುದ್ರಭೂಮಿ ಕಟ್ಟಡ ನಿರ್ಮಾಣ ಕಾರ್ಯ ನಡೆದು, ಅಂತಿಮ ಹಂತದಲ್ಲಿದೆ.ಈ ಮೂಲಕ ನಗರ ಹಾಗೂ ಸುತ್ತಲ ಮುತ್ತಲ ಜನತೆಯ ಬಹುವರ್ಷಗಳ ಬೇಡಿಕೆಯೊಂದು ಈಡೇರುತ್ತಿದೆ.
ನಗರದ ಸಮಾಜ ಸೇವಕ ಪ್ರಕಾಶ ಬೇಟ್ಕರ್ ಅವರ ಅಧ್ಯಕ್ಷತೆಯಲ್ಲಿ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯನ್ನು ರಚಿಸಿಕೊಂಡು ದಾನಿಗಳ ನೆರವಿನ ಮೂಲಕ ಹಿಂದೂ ರುದ್ರಭೂಮಿಗೆ ಕಟ್ಟಡ ನಿರ್ಮಾಣ ಕರ‍್ಯಕ್ಕೆ ಚಾಲನೆಯನ್ನು ನೀಡಿ ಶೇ 30ರಿಂದ 40 ರಷ್ಟು ಕಾಮಗಾರಿ ಮುಗಿದು, ಆನಂತರ ಕಾಮಗಾರಿ ಮುಂದುವರಿಸಲು ಕಷ್ಟಸಾಧ್ಯವಾದ ಸಂದರ್ಭದಲ್ಲಿ ಹಿಂದೂ ರುದ್ರಭೂಮಿ ಅಭಿವೃದ್ಧಿಯ ಸಮಿತಿಯ ಮನವಿಗೆ ಸ್ಪಂದಿಸಿ ತಡವರಿಯದೇ ನೆರವಿಗೆ ಧಾವಿಸಿದ್ದೇ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆ. ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯು ತನ್ನ ಸಿ.ಎಸ್.ಆರ್ ಯೋಜನೆಯ ಮೂಲಕ ಕಟ್ಟಡ ನಿರ್ಮಾಣದ ಉಳಿದ ನಿರ್ಮಾಣ ಕಾರ್ಯವನ್ನು ರೂ.12 ಲಕ್ಷ ಮೊತ್ತವನ್ನು ವ್ಯಯಿಸಿ, ಸುಸಜ್ಜಿತವಾದ ಹಿಂದೂ ರುದ್ರಭೂಮಿ ಕಟ್ಟಡ ನಿರ್ಮಿಸಿದೆ. ಇನ್ನೂಳಿದಂತೆ ಅಲ್ಲಿಗೆ ಅಗತ್ಯವಾಗಿ ಬೇಕಾಗಿರುವ ಮೂಲಸೌಕರ್ಯಕ್ಕಾಗಿ ಹೆಚ್ಚುವರಿ ರೂ.5 ಲಕ್ಷ ಮೊತ್ತವನ್ನು ಮಂಜೂರುಗೊಳಿಸಿ, ಆ ಕೆಲಸವನ್ನು ಮಾಡಲು ಮುಂದಡಿಯಿಟ್ಟಿದೆ. ಈಗಾಗಲೆ ಕಟ್ಟಡ ನಿರ್ಮಾಣ ಕರ‍್ಯ ಬಹುತೇಕ ಮುಗಿದಿದ್ದು, ಇನ್ನೂ ಶವ ಸುಡುವ ಸೌಕರ್ಯದ ಜೋಡಣೆಯಾಗಬೇಕಾಗಿದೆ. ಬಹುತೇಕ ಹಿಂದೂ ರುದ್ರಭೂಮಿ ಕಟ್ಟಡ ಜೂನ್ ಅಂತ್ಯದೊಳಗೆ ಲೋಕಾರ್ಪಣೆಯಾಗಲಿದೆ.
ಕಾಗದ ಕಾರ್ಖಾನೆಯ ನೆರವು ಹೊರತು ಪಡಿಸಿ, ಮತ್ತಷ್ಟು ಅಭಿವೃದ್ಧಿ ಕರ‍್ಯಗಳನ್ನು ನಡೆಸುವ ಚಿಂತನೆಯಲ್ಲಿ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯಿದೆ. ಉದ್ಯಾನವನ, ಶೆಡ್, ಭದ್ರತಾ ಕೊಠಡಿ, ಶೌಚಾಲಯ, ಸ್ನಾನ ಗೃಹ ಹೀಗೆ ಹತ್ತು ಹಲವು ಕಾರ್ಯಗಳು ನಡೆಯಬೇಕಾಗಿದ್ದು, ಮನುಷ್ಯನ ಜೀವನದ ಕಟ್ಟ ಕಡೆಯ ಯಾತ್ರೆ ಸಂತೃಪ್ತಿಯ ಯಾತ್ರೆ, ಸನ್ಮಾರ್ಗದ ಯಾತ್ರೆಯಾಗಬೇಕಾಗಿದ್ದು, ಆ ಹಿನ್ನಲೆಯಲ್ಲಿ ದಾನಿಗಳ ನೆರವು ಅವಶ್ಯವಾಗಿ ಬೇಕಾಗಿದೆ. ಈ ನಿಟ್ಟಿನಲ್ಲಿ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯನ್ನು ಸಂಪರ್ಕಿಸಿ, ವಿನೂತನ ಹಿಂದೂ ರುದ್ರಭೂಮಿಯನ್ನಾಗಿಸಲು ಸಹಕರಿಸಬಹುದಾಗಿದೆ.
ಕೋಟ್…
ಕಾಗದ ಕಾರ್ಖಾನೆಯ ಸಿ.ಎಸ್.ಆರ್ ಯೋಜನೆಯಡಿ ಈಗಾಗಲೆ ರೂ.12 ಲಕ್ಷ ವೆಚ್ಚವನ್ನು ವ್ಯಯಿಸಲಾಗಿದೆ. ಉಳಿದಂತೆ ಇನ್ನೂ ಅಗತ್ಯ ಮೂಲಸೌಕರ‍್ಯಗಳ ಜೋಡಣೆಗೆ ರೂ.5 ಲಕ್ಷ ಮೊತ್ತವನ್ನು ಹೆಚ್ಚುವರಿಯಾಗಿ ಮಂಜೂರು ಮಾಡಲಾಗಿದೆ.– ರಾಜೇಶ ತಿವಾರಿ, ಸಾರ್ವಜನಿಕ ಸಂಪರ್ಕಾಧಿಕಾರಿ, ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆ
ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ದಾನಿಗಳ ಸಹಕಾರ ಪಡೆದು ರುದ್ರಭೂಮಿ ಕಟ್ಟಡ ನಿರ್ಮಾಣ ಕಾರ‍್ಯ ಮಾಡಲಾಗಿತ್ತು. ಆನಂತರ ಆರ್ಥಿಕ ಸಮಸ್ಯೆ ಎದುರಾದಾಗ, ಕಾಗದ ಕಾರ್ಖಾನೆಯವರು ಕಟ್ಟಡ ನಿರ್ಮಾಣ ಕಾರ್ಯವನ್ನು ಮುಂದುವರಿಸಿ ಸಹಕರಿಸಿದ್ದಾರೆ.– ಪ್ರಕಾಶ ಬೇಟ್ಕರ್- ಸುಧಾಕರ ರೆಡ್ಡಿ, ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ