ಅಂಕೋಲಾ: ಹಲವು ದಿನಗಳಿಂದ ವಿವಾದಗಳಿಂದ ಕೂಡಿದ್ದ ತಾಲೂಕಿನ ತೆಂಕಣಕೇರಿಯ ಬೊಮ್ಮಯ್ಯ ದೇವರ ದೇವಸ್ಥಾನದ ಆಡಳಿತ ಹಸ್ತಾಂತರ ಪ್ರಕರಣವು ಶುಕ್ರವಾರ ಅಧಿಕಾರಿಗಳ ಸಮ್ಮುಖದಲ್ಲಿ ಸುಖಾಂತ್ಯ ಕಂಡಿತು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲಿನ್ ಅವರ ಆದೇಶದಂತೆ ತಹಶೀಲ್ದಾರರ ಉದಯ ಕುಂಬಾರ್ ಪರವಾಗಿ ಶಿರಸ್ತೇದಾರ ಗಿರೀಶ ಜಾಂಬಾವಳಿಕರ ಇವರ ಸಮ್ಮುಖದಲ್ಲಿ ದೇವಸ್ಥಾನದ ಮೊಕ್ತೇಸರ ಜಿ.ಸಿ.ನಾಯ್ಕ ಅವರು ದೇವಸ್ಥಾನದ ಆಡಳಿತವನ್ನು ಶುಕ್ರವಾರ ಸ್ಥಳೀಯ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.
ಏನಿದು ವಿವಾದ?: ತೆಂಕಣಕೇರಿ ಬೊಮ್ಮಯ್ಯ ದೇವಸ್ಥಾನ ಹಿಂದಿನಿಂದಲೂ ತನ್ನದೆಯಾದ ಪರಂಪರೆಯನ್ನು ಹೊಂದಿದ್ದು, ಪರಿವಾರ ದೇವತೆಗಳು ಸಹ ದೇವಸ್ಥಾನದ ಆವಾರದಲ್ಲೇ ಇವೆ. ಪ್ರತಿನಿತ್ಯ ಪೂಜೆ ಪುರಸ್ಕಾರಗಳು ನಡೆಯುತ್ತಿದ್ದವು. ಗ್ರಾಮದೇವಿ ಶಾಂತಾದುರ್ಗೆಯ ಬಂಡಿಹಬ್ಬದ ನಂತರ ತೆಂಕಣಕೇರಿ ಬಂಡಿಹಬ್ಬ ನಡೆಯುವುದು ವಾಡಿಕೆ. ಹಾಗೆಯೇ ವರ್ಷಂಪ್ರತಿ ಇಲ್ಲಿಯ ಬಂಡಿಹಬ್ಬವೂ ಸಹ ಅತೀ ವೈಭವಪೂರಿತವಾಗಿ ನಡೆಯುತ್ತದೆ. ಕಳೆದ 12 ವರ್ಷಗಳಿಂದ ಗಣಪತಿ ಸಿ.ನಾಯ್ಕ ಎಂಬುವವರು ದೇವಸ್ಥಾನದ ಆಡಳಿತ ಮಂಡಳಿಯ ಜವಾಬ್ದಾರಿಯನ್ನು ನಿರ್ವಹಿಸುತ್ತ ಬಂದಿದ್ದರು. ಸುಪ್ರೀಂ ಕೋರ್ಟ್ ದೇವಸ್ಥಾನಗಳಿಗೆ ಸ್ಥಳೀಯ ಆಡಳಿತ ಮಂಡಳಿ ರಚನೆ ಮಾಡಬೇಕೆಂಬ ಆದೇಶ ಹೊರಡಿಸಿತ್ತು. ಅದೇ ಪ್ರಕಾರ ಶ್ರೀಬೊಮ್ಮಯ್ಯ ದೇವರ ದೇವಸ್ಥಾನಕ್ಕೂ ಸ್ಥಳೀಯ ಆಡಳಿತ ಮಂಡಳಿಯನ್ನು ತಹಶೀಲ್ದಾರ ಸಮ್ಮುಖದಲ್ಲಿ ರಚಿಸಲಾಗಿತ್ತು.
ನಿಯಮದ ಪ್ರಕಾರ ನೂತನ ಆಡಳಿತ ಮಂಡಳಿಗೆ ದೇವಸ್ಥಾನದ ಆಡಳಿತವನ್ನು ಹಸ್ತಾಂತರಿಸಬೇಕಿತ್ತು. ಈ ಕುರಿತು ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಗಣೇಶ ನಾಯ್ಕ ಇವರು ಜಿ.ಸಿ.ನಾಯ್ಕರವರಿಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಜಿ.ಸಿ.ನಾಯ್ಕ ಅವರು ಅನಗತ್ಯ ವಿಳಂಬ ಮಾಡಿ ಆಡಳಿತವನ್ನು ಇದುವರೆಗೂ ಹಸ್ತಾಂತರಿಸಿರಲಿಲ್ಲ. ಅದಲ್ಲದೆ ಈ ವರ್ಷ ತಾಲೂಕಿನೆಲ್ಲೆಡೆ ಬಂಡಿಹಬ್ಬ ಆಚರಣೆಯಾದರೂ ಇಲ್ಲಿನ ಬೊಮ್ಮಯ್ಯದೇವರ ಬಂಡಿಹಬ್ಬ ಮಾತ್ರ ನಡೆಯಲಿಲ್ಲ. ಇದರಿಂದ ಆಕ್ರೋಶಗೊಂಡ ನೂತನ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರು ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಲ್ಲಿ ಮನವಿ ಸಲ್ಲಿಸಿದ್ದರು.
ಈ ಮನವಿಯ ಪ್ರಕಾರ ಮೇ 27ಕ್ಕೆ ತಹಶೀಲ್ದಾರರ ಸಮ್ಮುಖದಲ್ಲಿ ಆಡಳಿತವನ್ನು ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು. ಅದರಂತೆ ಶುಕ್ರವಾರ ಆಡಳಿತ ಹಸ್ತಾಂತರ ಪ್ರಕ್ರಿಯೆಯನ್ನು ನಡೆಯಿತು. ಜಿ.ಸಿ.ನಾಯ್ಕರವರಿಂದ ದೇವಸ್ಥಾನಕ್ಕೆ ಸಂಬಂಧಿಸಿದ ಸಮಸ್ತ ಬೀಗದ ಕೈಗಳನ್ನೂ, ದೇವರ 70 ಬಗೆಯ ಬೆಳ್ಳಿ- ಬಂಗಾರದ ಆಭರಣ, ನಗದು, ಬ್ಯಾಂಕುಗಳಲ್ಲಿನ ಎಫ್.ಡಿ ಸರ್ಟಿಫಿಕೇಟ್, ಕಾಗದಪತ್ರಗಳನ್ನೂ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಗಣೇಶ ಎನ್.ನಾಯ್ಕ ಅವರಿಗೆ ಹಸ್ತಾಂತರಿಸಿದರು.
ಆಡಳಿತ ಹಸ್ತಾಂತರ ಪ್ರಕ್ರಿಯೆಯಲ್ಲಿ ಉಪತಹಶೀಲ್ದಾರ ಎಸ್.ಪಿ.ಹರಿಕಾಂತ, ಕಂದಾಯ ನಿರೀಕ್ಷಕ ಮಂಜುನಾಥ ನಾಯ್ಕ, ಗ್ರಾಮ ಲೆಕ್ಕಾಧಿಕಾರಿ ಲಲಿತಾ ಆಗೇರ ಪಾಲ್ಗೊಂಡಿದ್ದರು. ಸಿಪಿಐ ಸಂತೋಷ ಶೆಟ್ಟಿ, ಪಿಎಸ್‌ಐ ಮಾಲಿನಿ ಹಾಸಭಾವಿ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದು ಸೂಕ್ತ ಬಂದೋಬಸ್ತ್ ಒದಗಿಸಿದರು.