ಕಾರವಾರ: ಎರಡು ದಿನಗಳ ಕಾರವಾರ ಪ್ರವಾಸದಲ್ಲಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಜಲಾಂತರ್ಗಾಮಿ ನೌಕೆ ಐಎನ್‌ಎಸ್ ಖಂಡೇರಿಯಲ್ಲಿ ಕಡಲ ವಿಹಾರ ನಡೆಸಿದರು.
ಕಲ್ವರಿ ದರ್ಜೆಯ ಜಲಾಂತರ್ಗಾಮಿ ನೌಕೆಯಾದ ಖಂಡೇರಿಯ ಯುದ್ಧ ಸಾಮರ್ಥ್ಯಗಳು ಮತ್ತು ಆಕ್ರಮಣಕಾರಿ ಸಾಮರ್ಥ್ಯದ ಬಗ್ಗೆ ಅವರು ಈ ವೇಳೆ ಮಾಹಿತಿ ಪಡೆದುಕೊಂಡರು. ಸುಮಾರು ನಾಲ್ಕು ಗಂಟೆಗಳ ಕಾಲ ನೌಕೆಯಲ್ಲಿ ನೀರೊಳಗಿದ್ದು ಖುದ್ದು ನೀರೊಳಗಿನ ಕಾರ್ಯಾಚರಣಾ ವಿಧಾನ ಹಾಗೂ ಸಾಮರ್ಥ್ಯಗಳನ್ನು ಅರಿತುಕೊಂಡರು. ಈ ವೇಳೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್ ಮತ್ತು ಭಾರತೀಯ ನೌಕಾಪಡೆ ಹಾಗೂ ರಕ್ಷಣಾ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಸಚಿವರಿಗೆ ಸಾಥ್ ನೀಡಿದರು.
ಈ ವೇಳೆ ವೆಸ್ಟರ್ನ್ ಕಮಾಂಡ್‌ನ ನೌಕೆಗಳ ಪ್ರದರ್ಶನ, ಪಿ- 81 ಎಂಪಿಎ ಮತ್ತು ಹೆಲಿಕಾಪ್ಟರ್‌ನಿಂದ ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆ, ಮಿಗ್ 29- ಕೆ ಫೈಟರ್‌ಗಳ ಹಾರಾಟ ಮತ್ತು ಪಾರುಗಾಣಿಕಾ ಸಾಮರ್ಥ್ಯವನ್ನೂ ಈ ವೇಳೆ ಸಚಿವರಿಗಾಗಿ ಪ್ರದರ್ಶಿಸಲಾಯಿತು.
ಮುಂಬೈನ ಮಜಗಾಂವ್ ಡಾಕ್ಸ್ ಲಿಮಿಟೆಡ್‌ನಲ್ಲಿ ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಅಡಿಯಲ್ಲಿ, ಪ್ರಾಜೆಕ್ಟ್ 75 ಜಲಾಂತರ್ಗಾಮಿ ನೌಕೆಗಳ ಪೈಕಿ ಈ ಐಎನ್‌ಎಸ್ ಖಂಡೇರಿ ಎರಡನೆಯದಾಗಿದೆ. ರಾಜನಾಥ್ ಸಿಂಗ್ ಅವರೇ 2019ರ ಸೆಪ್ಟೆಂಬರ್ 28ರಂದು ಇದನ್ನು ಕರ್ತವ್ಯಕ್ಕೆ ನಿಯೋಜಿಸಿದ್ದರು.
ನೌಕಾಪಡೆಯ ಸಾಮರ್ಥ್ಯ ವೃದ್ಧಿಸುತ್ತಿರುವುದು ಯಾವುದೇ ಆಕ್ರಮಣಕ್ಕಲ್ಲ: ರಾಜನಾಥ್ ಸಿಂಗ್
ಕಡಲ ವಿಹಾರದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ರಾಜನಾಥ್ ಸಿಂಗ್, ಭಾರತೀಯ ನೌಕಾಪಡೆಯು ಆಧುನಿಕ, ಪ್ರಬಲ ಮತ್ತು ವಿಶ್ವಾಸಾರ್ಹ ಶಕ್ತಿ ಎಂದು ಬಣ್ಣಿಸಿದರು. ಎಲ್ಲಾ ಸಂದರ್ಭಗಳಲ್ಲಿ ಜಾಗರೂಕರಾಗಿ, ಶೌರ್ಯದಿಂದ ಮತ್ತು ವಿಜಯಶಾಲಿಯಾಗಲು ಸಮರ್ಥರಾಗಿದ್ದಾರೆ. ಇಂದು ಭಾರತೀಯ ನೌಕಾಪಡೆಯು ವಿಶ್ವದ ಮುಂಚೂಣಿ ನೌಕಾಪಡೆಗಳಲ್ಲಿ ಒಂದಾದೆ. ವಿಶ್ವದ ಅತಿದೊಡ್ಡ ಕಡಲ ಪಡೆಗಳು ಭಾರತದೊಂದಿಗೆ ಕೆಲಸ ಮಾಡಲು ಮತ್ತು ಸಹಕರಿಸಲು ಸಿದ್ಧವಾಗಿವೆ ಎಂದು ಅವರು ಹೇಳಿದರು.
‘ಐಎನ್‌ಎಸ್ ಖಂಡೇರಿ’ ದೇಶದ ‘ಮೇಕ್ ಇನ್ ಇಂಡಿಯಾ’ ಸಾಮರ್ಥ್ಯದ ಉಜ್ವಲ ಉದಾಹರಣೆಯಾಗಿದೆ. ಭಾರತೀಯ ನೌಕಾಪಡೆ ಆದೇಶಿಸಿದ 41 ಹಡಗುಗಳು/ ಜಲಾಂತರ್ಗಾಮಿ ನೌಕೆಗಳಲ್ಲಿ 39 ಭಾರತೀಯ ನೌಕಾನೆಲೆಗಳಲ್ಲಿ ನಿರ್ಮಾಣವಾಗುತ್ತಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತೀಯ ನೌಕಾಪಡೆಯ ಸ್ವದೇಶಿ ಪರಿಕಲ್ಪನೆ ಹಾಗೂ ಅದನ್ನು ಅನುಷ್ಠಾನಗೊಳಿಸಿದ ವೇಗವು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯಂತೆ ‘ಆತ್ಮನಿರ್ಭರ್ ಭಾರತ್’ ಸಾಧಿಸುವ ಸಂಕಲ್ಪವನ್ನು ಬಲಪಡಿಸಿದೆ ಎಂದರು.
ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ವಿಕ್ರಾಂತ್ ಕಾರ್ಯಾರಂಭದ ಕುರಿತು ಮಾತನಾಡಿದ ಅವರು, ಐಎನ್‌ಎಸ್ ವಿಕ್ರಮಾದಿತ್ಯ ಜೊತೆಗೆ ಐಎನ್‌ಎಸ್ ವಿಕ್ರಾಂತ್ ಸೇರಿ ದೇಶದ ಕಡಲ ಭದ್ರತೆಯನ್ನು ಬಲಪಡಿಸುತ್ತದೆ ಎಂದು ಹೇಳಿದರು. ಭಾರತೀಯ ನೌಕಾಪಡೆ ನಡೆಸುತ್ತಿರುವ ಸಿದ್ಧತೆಗಳು ಯಾವುದೇ ಆಕ್ರಮಣಕ್ಕೆ ಪ್ರಚೋದನೆಯಲ್ಲ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯ ಭರವಸೆಯನ್ನು ಮೂಡಿಸುವ ಉದ್ದೇಶ ಇದರ ಹಿಂದಿದೆ ಎಂದು ಹೇಳಿದರು.
ಯೋಗಾಭ್ಯಾಸ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಸೂರ್ಯೋದಯದ ಸಮಯದಲ್ಲಿ ಸೀಬರ್ಡ್ ನೌಕಾನೆಲೆ ವ್ಯಾಪ್ತಿಯ ಕಾಮತ್ ಬೀಚ್‌ನಲ್ಲಿ ನೌಕಾಸೇನಾ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಯೋಗ್ಯಾಭ್ಯಾಸ ಮಾಡಿದರು.