ಕಾರವಾರ: ಈಗಾಗಲೇ ದೇಶದ ಅತಿದೊಡ್ಡ ವಿಮಾನವಾಹಕ ಯುದ್ಧನೌಕೆ ಐಎನ್‌ಎಸ್ ವಿಕ್ರಮಾದಿತ್ಯಗೆ ತವರಾಗಿರುವ ಇಲ್ಲಿನ ಸೀಬರ್ಡ್ ನೌಕಾನೆಲೆಯು ಶೀಘ್ರದಲ್ಲೇ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ (ಐಎಸಿ) ಐಎನ್‌ಎಸ್ ವಿಕ್ರಾಂತ್‌ಗೂ ಕೂಡ ನೆಲೆಯಾಗಲಿದೆ. ಮೂಲಗಳ ಪ್ರಕಾರ ಆಗಸ್ಟ್ ತಿಂಗಳಿನಲ್ಲಿ ಭಾರತೀಯ ನೌಕಾಪಡೆಯ ಕಾರ್ಯಾಚರಣೆಗೆ ಸೇರ್ಪಡೆಗೊಳ್ಳಲಿರುವ ವಿಕ್ರಾಂತ್ ಅನ್ನು ಕೂಡ ಕಾರವಾರದಲ್ಲೇ ಇರಿಸಲು ನೌಕಾಪಡೆ ತೀರ್ಮಾನಿಸಿದೆ ಎನ್ನಲಾಗಿದೆ.
ಇಲ್ಲಿನ ಸೀಬರ್ಡ್ ನೌಕಾನೆಲೆಯು ಈಗಾಗಲೇ ಐಎನ್‌ಎಸ್ ವಿಕ್ರಮಾದಿತ್ಯಗೆ ನೆಲೆಯಾಗಿದೆ. ಇದರೊಂದಿಗೆ ಒಟ್ಟಾರೆ 11,000 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ನೌಕಾನೆಲೆಯು 2025ರ ವೇಳೆಗೆ ಏಷ್ಯಾದ ಅತಿದೊಡ್ಡ ನೌಕಾನೆಲೆಯಾಗಿ ರೂಪುಗೊಳ್ಳಲಿದ್ದು, ಐಎನ್‌ಎಸ್ ವಿಕ್ರಮಾದಿತ್ಯದ ಜೊತೆಗೆ 30 ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳಿಗೆ ನೆಲೆಯಾಗಲಿದೆ. ಪ್ರಾಜೆಕ್ಟ್ ಸೀಬರ್ಡ್ ಫೇಸ್- 2 ಅಡಿಯಲ್ಲಿ ಈಗಾಗಲೇ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎರಡನೇ ಬಾರಿಗೆ ನೌಕಾನೆಲೆಗೆ ಭೇಟಿ ನೀಡಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ್ದಾರೆ.
ನೌಕಾನೆಲೆಯಲ್ಲಿ ನಿರ್ಮಾಣವಾಗುತ್ತಿರುವ ನೌಕಾ ವಿಮಾನ ನಿಲ್ದಾಣಕ್ಕೆ ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ ರನ್‌ವೇ ವಿಸ್ತರಣೆಯಾಗಲಿದ್ದು, ಇಲ್ಲಿ ನಾಗರಿಕ ವಿಮಾನ ಕಾರ್ಯಾಚರಣೆಗಳಿಗೂ ಅವಕಾಶ ನೀಡಲಾಗುತ್ತದೆ. ಇದೇ ರನ್‌ವೇನಲ್ಲಿ ನೌಕಾಪಡೆಯ ಕಡಲ ವಿಮಾನಗಳು ಮತ್ತು ಯುದ್ಧ ವಿಮಾನಗಳ ಕಾರ್ಯಾಚರಣೆಯೂ ನಡೆಯಲಿದೆ. ಹೀಗಾಗಿ ಈ ಅಭಿವೃದ್ಧಿ ಚಟುವಟಿಕೆಗಳು ಈ ಪ್ರದೇಶದ ಆರ್ಥಿಕತೆಗೆ ಉತ್ತೇಜನ ನೀಡಲಿದೆ.
ಏನಿದು ಐಎನ್‌ಎಸ್ ವಿಕ್ರಾಂತ್?
ಈಗಾಗಲೇ ತನ್ನ ಪರೀಕ್ಷಾರ್ಥ ಸಂಚಾರ ಮುಗಿಸಿ ಸೇವೆಗೆ ಸರ್ವಸನ್ನದ್ಧವಾಗಿರುವ ಐಎನ್‌ಎಸ್ ವಿಕ್ರಾಂತ್ ಭಾರತದ ಹೆಮ್ಮೆಯ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆಯಾಗಿದೆ. ಸುಮಾರು 40,000 ಟನ್ ತೂಕದ ಈ ಯುದ್ಧನೌಕೆಯನ್ನು ಅಂದಾಜು 23 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಿಸಲಾಗಿದೆ. 262 ಮೀಟರ್ ಉದ್ದ, 62 ಮೀಟರ್ ಅಗಲ, 59 ಮೀಟರ್ ಎತ್ತರದ ಈ ನೌಕೆಯಲ್ಲಿ ಒಟ್ಟಾರೆ 14 ಡೆಕ್‌ಗಳಿವೆ.
ಮಿಗ್ 29- ಕೆ ಯುದ್ಧವಿಮಾನಗಳು, ಕಮೋವ್- 31 ಹೆಲಿಕಾಪ್ಟರ್‌ಗಳು, ಎಂಎಚ್- 60ಆರ್ ಮಲ್ಟಿ ರೋಲ್ ಹೆಲಿಕಾಪ್ಟರ್‌ಗಳು ಇದರ ಮೇಲಿಂದ ಕಾರ್ಯನಿರ್ವಹಿಸಲಿವೆ. ಸುಮಾರು 28 ನಾಟಿಕಲ್ ಗರಿಷ್ಠ ವೇಗವನ್ನು ಹೊಂದಿದ್ದು, 7,500 ನಾಟಿಕಲ್ ಮೈಲುಗಳನ್ನು 18 ನಾಟಿಕಲ್ ವೇಗದೊಂದಿಗೆ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ನೌಕೆಯಲ್ಲಿ 2,300ಕ್ಕೂ ಹೆಚ್ಚು ಕಂಪಾರ್ಟ್ಮೆಂಟ್‌ಗಳಿದ್ದು, ಸುಮಾರು 1,700 ಸಿಬ್ಬಂದಿಗಾಗಿ ವಿನ್ಯಾಸಗೊಳಿಸಲಾಗಿದೆ. ಮಹಿಳಾ ಅಧಿಕಾರಿಗಳಿಗೆ ಪ್ರತ್ಯೇಕ ವಸತಿ ಸೌಕರ್ಯಗಳಿವೆ. ಯಂತ್ರೋಪಕರಣಗಳ ಕಾರ್ಯಾಚರಣೆ, ಹಡಗು ಸಂಚರಣೆ ಮತ್ತು ಸಿಬ್ಬಂದಿ ವಾಸ್ತವ್ಯಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಈ ಹಿಂದೆ 1961ರಿಂದ 1997ರವರೆಗೂ ಐಎನ್‌ಎಸ್ ವಿಕ್ರಾಂತ್ ಭಾರತೀಯ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸಿತ್ತು. ಈ ನೌಕೆಯ ಗೌರವಾರ್ಥ ಮತ್ತು ಸ್ಮರಣಾರ್ಥವಾಗಿ ದೇಶದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆಗೆ ಇದೇ ಹೆಸರನ್ನಿಡಲಾಗಿದೆ.