• Slide
    Slide
    Slide
    previous arrow
    next arrow
  • ವಿಮಾನ ನಿಲ್ದಾಣ,ನೌಕಾನೆಲೆ ನಿರಾಶ್ರಿತರಿಗೆ ಅಧಿಕ ಪರಿಹಾರ,ವಿವಿಧ ಸೌಲಭ್ಯಕ್ಕೆ ರೂಪಾಲಿ ಆಗ್ರಹ

    300x250 AD

    ಕಾರವಾರ: ಅರಗಾದಲ್ಲಿರುವ ಐಎನ್‌ಎಸ್ ಕದಂಬ ನೌಕಾನೆಲೆಗೆ ಗುರುವಾರ ಆಗಮಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ಜನತೆಯ ಪರವಾಗಿಶಾಸಕಿ ರೂಪಾಲಿ ಎಸ್.ನಾಯ್ಕ ಸತ್ಕರಿಸಿದರು. ನಂತರ ಕ್ಷೇತ್ರದ ಹಲವು ಬೇಡಿಕೆಗಳ ಕುರಿತು ಸಚಿವರ ಗಮನ ಸೆಳೆದರು. ಶಾಸಕರು ಕ್ಷೇತ್ರದ ಸಮಸ್ಯೆಗಳನ್ನು ವಿವರಿಸುತ್ತಿದ್ದಂತೆ ಆಲಿಸಿದ ರಾಜನಾಥ ಸಿಂಗ್ ಮನವಿಗೆ ಸ್ಪಂದಿಸಿದರು.

    ಅಂಕೋಲಾ ಬಳಿ ಉದ್ದೇಶಿತ ವಿಮಾನ ನಿಲ್ದಾಣ ನಿರಾಶ್ರಿತರಿಗೆ ಅತಿ ಹೆಚ್ಚಿನ ಪರಿಹಾರ, ಪುನರ್ವಸತಿ, ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ಥರೆಂದು ಪರಿಗಣಿಸುವುದು ಹಾಗೂ ನೌಕಾನೆಲೆ ನಿರಾಶ್ರಿತರಿಗೆ ಉದ್ಯೋಗ ನೀಡಿಕೆ ಹಾಗೂ ಇತರ ಸೌಲಭ್ಯ ಕಲ್ಪಿಸುವಂತೆ ಶಾಸಕಿ ರೂಪಾಲಿ ಎಸ್.ನಾಯ್ಕ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಆಗ್ರಹಿಸಿದರು.

    ಅಂಕೋಲಾ ಬಳಿ ನೌಕಾನೆಲೆಯಿಂದ ನಾಗರಿಕ ಬಳಕೆಗೂ ಮುಕ್ತವಾಗಿರಲಿರುವ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಈ ವಿಮಾನ ನಿಲ್ದಾಣಕ್ಕೆ 93 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದ್ದು, ಹಲವು ಕುಟುಂಬ ನಿರಾಶ್ರಿತವಾಗಲಿದೆ. ಈ ಹಿಂದೆ ನೌಕಾನೆಲೆಯಿಂದ ನಿರಾಶ್ರಿತವಾಗಿರುವ ಕುಟುಂಬ ಮತ್ತೊಮ್ಮೆ ನಿರಾಶ್ರಿತವಾಗಲಿದೆ. ಮಾನವೀಯತೆ ಹಿನ್ನೆಲೆಯಲ್ಲಿ ಈ ಕುಟುಂಬಗಳಿಗೆ ಅತಿ ಹೆಚ್ಚಿನ ಪರಿಹಾರ, ಪುನರ್ವಸತಿ, ಉದ್ಯೋಗ ಹಾಗೂ ಇತರ ಸೌಲಭ್ಯಗಳನ್ನು ನೀಡುವಂತೆ ರೂಪಾಲಿ ಎಸ್. ನಾಯ್ಕ ಮನವಿ ಮಾಡಿದರು.

    ರಾಷ್ಟ್ರೀಯ ಸಂತ್ರಸ್ಥರೆಂದು ಘೋಷಣೆ ಮಾಡಬೇಕು: ಸೀಬರ್ಡ ನೌಕಾನೆಲೆ ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರು ಎಂದು ಘೋಷಣೆ ಮಾಡಿ, ನಿರಾಶ್ರಿತ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ನೀಡಬೇಕು. ಕಾರವಾರ ಹಾಗೂ ಅಂಕೋಲಾ ಈ ಎರಡೂ ತಾಲೂಕಿನ 4604 ಕುಟುಂಬಗಳು ನೌಕಾನೆಲೆಯಲ್ಲಿ ನಿರಾಶ್ರಿತವಾಗಿವೆ. ಈ ಕುಟುಂಬಗಳು ನಿರಾಶ್ರಿತವಾಗಿ 3 ದಶಕಗಳಾದರೂ ಸಮಾಜದಲ್ಲಿ ಗೌರವಯುತ ಬದುಕು ಕಂಡುಕೊಳ್ಳುವಲ್ಲಿ ಇದುವರೆಗೂ ಸಾಧ್ಯವಾಗಿಲ್ಲ. ಸದ್ಯ ಕೇವಲ 968 ಕುಟುಂಬಗಳಿಗೆ ಮಾತ್ರ ಉದ್ಯೋಗ ನೀಡಲಾಗಿದೆ.

    300x250 AD

    ನೌಕಾನೆಲೆ ನಿರಾಶ್ರಿತರು ದೇಶಕ್ಕಾಗಿ, ದೇಶದ ರಕ್ಷಣೆಗಾಗಿ ತಮ್ಮ ಮನೆ, ಭೂಮಿ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಈ ಕಾರಣದಿಂದ ನಿರಾಶ್ರಿತರು ಉದ್ಯೋಗ, ಗೌರವಯುತ ಬದುಕಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನೂ ಹೊಂದಿ ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರ್ಪಡೆಯಾಗುವಂತಾಗಬೇಕು. ಇದಕ್ಕಾಗಿ ನೌಕಾನೆಲೆ ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರು ಎಂದು ಘೋಷಣೆ ಮಾಡಬೇಕು. ಎಲ್ಲ ೪ ಸಾವಿರಕ್ಕೂ ಹೆಚ್ಚು ನಿರಾಶ್ರಿತ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಕೊಡಬೇಕು. ಅವರಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನೂ ದೊರಕಿಸಿಕೊಡುವ ಮೂಲಕ ದೇಶಕ್ಕಾಗಿ ತ್ಯಾಗ ಮಾಡಿದವರ ಬದುಕು ಹಸನಾಗುವಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಶಾಸಕರು ಮನವಿ ಮಾಡಿದರು.

    ಶಿಪ್‌ಯಾರ್ಡ್ ನಿರ್ಮಾಣ: ಸೀಬರ್ಡ್ ನೌಕಾನೆಲೆಯ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ನೌಕಾನೆಲೆಗೆ ಅಗತ್ಯ ಸಾಮಗ್ರಿಗಳ ತಯಾರಿಕೆಗೆ ಇಲ್ಲಿ ಯಾವುದೆ ಕೈಗಾರಿಕೆಗಳಿಲ್ಲ. ಸ್ಥಳೀಯ ಜನತೆಗೆ ಉದ್ಯೋಗ ಕೊಡುವ ಕೈಗಾರಿಕೆಗಳೂ ಇಲ್ಲಿಲ್ಲ. ಈ ಕಾರಣಕ್ಕಾಗಿ ಸರ್ಕಾರಿ ಸ್ವಾಮ್ಯದಲ್ಲಿ ರಕ್ಷಣಾ ಇಲಾಖೆ ನೌಕಾನೆಲೆಯಲ್ಲಿ ಶಿಪ್ ಯಾರ್ಡ ಹಾಗೂ ಪೂರಕ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕರು ರಕ್ಷಣಾ ಸಚಿವರನ್ನು ವಿನಂತಿಸಿದ್ದಾರೆ.

    ಉದ್ಯೋಗ, ಸ್ಥಳೀಯ ವಾಹನಗಳಿಗೆ ಅವಕಾಶ: ನೌಕಾನೆಲೆಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸಬೇಕು ಎನ್ನುವ ಬೇಡಿಕೆಯನ್ನೂ ಶಾಸಕರು, ರಾಜನಾಥ ಸಿಂಗ್ ಅವರ ಮುಂದಿಟ್ಟರು. ಸೀಬರ್ಡ್ ನಿರಾಶ್ರಿತರಿಗೆ ಮೂರು ದಶಕಗಳಿಂದ ಕಗ್ಗಂಟಾಗಿದ್ದ ಪರಿಹಾರವನ್ನು ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಂದ ಮೇಲೆ ಅವರ ಮಾರ್ಗದರ್ಶನ, ಅಂದಿನ ರಕ್ಷಣಾ ಸಚಿವರಾಗಿದ್ದ ದಿ.ಮನೋಹರ ಪರಿಕ್ಕರ್, ಸಂಸದರಾದ ಅನಂತಕುಮಾರ್ ಹೆಗಡೆ ಅವರ ಪ್ರಯತ್ನದಿಂದ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಕಾರವಾರಕ್ಕೆ ಆಗಮಿಸಿ ಪರಿಹಾರ ನೀಡಿದ್ದನ್ನೂ ಶಾಸಕಿ ರೂಪಾಲಿ ನಾಯ್ಕ, ರಾಜನಾಥ ಸಿಂಗ್ ಅವರಿಗೆ ವಿವರಿಸಿ, ಧನ್ಯವಾದಗಳನ್ನು ಸಲ್ಲಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top