
ಅಂಕೋಲಾ: ತಾಲೂಕಿನ ಶೇವ್ಕಾರು, ಹೆಗ್ಗಾರು, ಕೋನಾಳ, ಹಳವಳ್ಳಿ, ಕಲ್ಲೇಶ್ವರ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಈಗ ಇದ್ದ ಏಕಮಾತ್ರ ಸೇತುವೆ ಗುಳ್ಳಾಪುರ ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಈಗ ಈ ಭಾಗದ ಜನರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಹೈವೇ ಸಂಪರ್ಕಕ್ಕೆ ಇದ್ದ ಏಕಮಾತ್ರ ಸೇತುವೆ ಇದಾಗಿದ್ದು, ಮಳೆಯ ಕಾರಣಕ್ಕೆ ನೀರು ಮಿತಿ ಮೀರಿ ಬಂದಿದ್ದರ ಪರಿಣಾಮವಾಗಿ ಗುಳ್ಳಾಪುರ ಬ್ರಿಜ್ ನೀರಿನಲ್ಲಿ ಕೊಚ್ಚಿ ಹೋಗಿದೆ ಎನ್ನಲಾಗಿದೆ.
ಇದು ಆ ಭಾಗದ ಜನರಿಗೆ ನಿಜವಾದ ದೊಡ್ಡ ಹೊಡೆತವಾಗಿದ್ದು, ಈಗ ಅಲ್ಲಿಯ ಜನ ಯಲ್ಲಾಪುರ ಸಂಪರ್ಕ ಮಾಡಲು ಇರುವುದು ಎರಡೇ ದಾರಿಯಾಗಿದೆ.
ಒಂದು ಮತ್ತಿಘಟ್ಟ ದಾರಿ. ಇನ್ನೊಂದು ಧೋರಣಗಿರಿ ಗುಡ್ಡದ ದಾರಿ. ಅವೆರಡೂ ಕಷ್ಟದ ದಾರಿಗಳಾಗಿದ್ದು, ಧೋರಣಗಿರಿ ದಾರಿಯಲ್ಲಿ ಘಟ್ಟ ಹತ್ತಿ ಬಂದರೆ, ಮೊದಲು ಯಲ್ಲಾಪುರ 25 ಕಿಲೋಮೀಟರ್ ಆಗಿದ್ರೆ ಈಗ 75 ಕಿಲೋಮೀಟರ್ ಆಗಲಿದೆ. ಹೊಳೆಯ ಮತ್ತೊಂದು ಭಾಗದಲ್ಲಿ (ಅರ್ಧದ್ವೀಪದಂತಾಗಿರುವ ಭಾಗದಲ್ಲಿ ) ಯಾವುದೇ ವೈದ್ಯಕೀಯ ವ್ಯವಸ್ಥೆ ಇಲ್ಲ ಎಂಬ ಮಾಹಿತಿ ದೊರಕಿದ್ದು, ಸಂಬಂಧಪಟ್ಟ ಇಲಾಖೆ ಈ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ.