ಶಿರಸಿ: ರಾಜ್ಯದಲ್ಲಿಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಸುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಮೂಲ ಸೌಲಭ್ಯ ಕಲ್ಪಿಸುವ ಮೂಲಕ ಪ್ರವಾಸಿ ಕೇಂದ್ರಗಳನ್ನು ಹೆಚ್ಚೆಚ್ಚು ಅಭಿವೃದ್ಧಿ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಉದ್ಯಮಿ ಭೀಮಣ್ಣ ನಾಯ್ಕ ಮಾಲೀಕತ್ವದ ಸುಪ್ರಿಯಾ ಇಂಟರ್ ನ್ಯಾಷನಲ್ ಹೊಟೇಲ್ ಉದ್ಘಾಟಿಸಿ ಅವರು ಮಾತನಾಡಿದರು. ಪ್ರವಾಸೋದ್ಯಮ ಬೆಳೆಯಲು ಉತ್ತಮ ವಸತಿ ವ್ಯವಸ್ಥೆ ಬೇಕು. ಇದು ಪ್ರವಾಸಿಗರಿಗೆ ಅನುಕೂಲವಾಗುತ್ತದೆ. ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ ಪ್ರವಾಸೋದ್ಯಮ ಬೆಳೆಸುವುದಕ್ಕೆ ಅನುದಾನ ಒದಗಿಸಿರುವುದಾಗಿ ತಿಳಿಸಿದರು. ಪ್ರವಾಸೋದ್ಯಮದಿಂದಲೇ ಸಾಕಷ್ಟು ದೇಶಗಳು ಅಭಿವೃದ್ಧಿ ಸಾಧಿಸಿವೆ. ಅದೇ ರೀತಿ ರಾಜ್ಯದಲ್ಲೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಗಬೇಕು ಎಂದರು.
ಉದ್ಯಮ ಬೆಳೆದರೆ ಉದ್ಯೋಗ ಸೃಷ್ಟಿಯಾಗುತ್ತದೆ. ಉದ್ಯೋಗ ಸೃಷ್ಟಿಯಾದರೆ ರಾಜ್ಯದ ಹಾಗೂ ದೇಶದ ಆರ್ಥಿಕತೆ ಸುಧಾರಿಸುತ್ತದೆ. ಆದರೆ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಇರಬೇಕು. ಬಂಡವಾಳ ಹೂಡುವ ವಾತಾವರಣವಿರಬೇಕು. ಆ ವಾತಾವರಣ ಇಲ್ಲದಿದ್ದರೆ ಬಂಡವಾಳ ಹೂಡಲು ಯಾರೂ ಮುಂದೇ ಬರುವುದಿಲ್ಲ ಎಂದು ಎಚ್ಚರಿಸಿದರು.
ಮಾಜಿ ಸಚಿವ ಆರ್ ವಿ ದೇಶಪಾಂಡೆ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡಿದ್ದೆವು. ರಾಜ್ಯದ ಇತಿಹಾಸದಲ್ಲೇ ಪ್ರವಾಸೋದ್ಯಮ ಅಭಿವೃದ್ಧಿಗೆ ನಮ್ಮ ಸರ್ಕಾರ ಅತಿ ಹೆಚ್ಚಿನ ಮಹತ್ವ ನೀಡಿತ್ತು. ಇದೇ ವೇಳೆ ಜಿಲ್ಲೆಯ ಪ್ರವಾಸೋದ್ಯಮವನ್ನೂ ಪ್ರಗತಿಗೊಳಿಸಲು ಯತ್ನಿಸಿದ್ದೇವೆ. ಶಿರಸಿ ಸುತ್ತಮುತ್ತಲಿನ ಸ್ಥಳದಲ್ಲೇ ಬನವಾಸಿ, ಮಾರಿಗುಡಿ, ಜಲಪಾತಗಳೇ ಜಾಸ್ತಿ ಇವೆ. ಈ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿದ್ದುದರಿಂದ ಇಲ್ಲಿಯ ಯುವಕರು ಎಲ್ಲರೂ ನೌಕರಿಗಾಗೇ ಯತ್ನಿಸಬಾರದು. ಸ್ವ ಉದ್ಯೋಗದತ್ತ ಯತ್ನಿಸಬೇಕು ಎಂದರು.
ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಮಾತನಾಡಿ, ಪ್ರವಾಸೋದ್ಯಮ ದೃಷ್ಟಿಕೋನದಿಂದ ಈ ಹೊಟೆಲ್ ನಿರ್ಮಾಣ ಆಗಿದೆ. ಕೃಷಿಕರು ಉದ್ಯಮದಲ್ಲಿ ತೊಡಗಿಕೊಳ್ಳಬೇಕು. ಭೀಮಣ್ಣ ನಾಯ್ಕ ಒಂದು ಮಾದರಿ ಉದ್ಯಮಿ ಆಗಿದ್ದಾರೆ ಎಂದರು.
ಹೆಸರಾಂತ ಚಿತ್ರನಟ ಶಿವರಾಜ್ ಕುಮಾರ್, ನಮ್ಮೂರು ಮಂದಾರ ಹೂವೆ ಸೇರಿದಂತೆ ಜಿಲ್ಲೆಯಲ್ಲಿ ತಮ್ಮ ಚಿತ್ರಗಳ ಚಿತ್ರೀಕರಣ ನೆನಪು ಮಾಡಿಕೊಂಡರಲ್ಲದೇ, ಸುಪ್ರಿಯ ಹೊಟೆಲ್ ಒಂದು ಬ್ರಾಂಡ್ ಹೋಟೆಲ್ ಆಗಲಿ ಎಂದು ಆಶಿಸಿದರು. ಛಲ, ಶ್ರದ್ಧೆಯಿದ್ದರೆ ಯಾವುದೇ ಕೆಲಸದಲ್ಲೂ ಯಶಸ್ಸು ದೊರೆಯುತ್ತದೆ ಎಂದರು.
ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೆಕಾದರೆ ಸರಕಾರ ಕೈಗೊಳ್ಳುವ ಕೆಲಸದ ಜತೆಗೆ ಖಾಸಗಿ ಸಹಭಾಗಿತ್ವವೂ ಬೇಕಾಗುತ್ತದೆ ಎಂದರು.
ಪ್ರಮುಖರಾದ ಅಶೋಕ ಪಟ್ಟಣ, ಕೆ.ಎನ್.ತಿಲಕಕುಮಾರ, ಸುಜಾತಾ ತಿಲಕುಮಾರ, ಮಾಜಿ ಶಾಸಕ ಮಧು ಬಂಗಾರಪ್ಪ, ಅನಿತಾ ಮಧು ಬಂಗಾರಪ್ಪ, ಶಿವರಾಜ ಕುಮಾರ ಪತ್ನಿ ಗೀತಾ ಶಿವರಾಜಕುಮಾರ, ಶಿರಸಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಜಯದೇವ ನಿಲೇಕಣಿ, ಟಿಎಸ್‌ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಅಶ್ವಿನ್ ಭೀಮಣ್ಣ ನಾಯ್ಕ, ಗೀತಾ ಭೀಮಣ್ಣ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಉದ್ಯಮಿ ಭೀಮಣ್ಣ ನಾಯ್ಕ ಸ್ವಾಗತಿಸಿದರು. ಪ್ರೊ.ಕೆ.ಎನ್.ಹೊಸ್ಮನಿ ನಿರೂಪಿಸಿದರು.
ಕೈಗೆಟುಕದ ಅದೃಷ್ಟ: ಭೀಮಣ್ಣ ನಾಯ್ಕ ಅವರಿಗೆ ರಾಜಕೀಯದಲ್ಲಿ ಅದೃಷ್ಟ ದೊರೆತಿಲ್ಲ. ವಿಧಾನಸಭೆ ಹಾಗು ವಿಧಾನಪರಿಷತ್ ಚುನಾವಣೆಯಲ್ಲಿ ಹಲವು ಭಾರಿ ಸ್ಪರ್ಧಿಸಿದರೂ ಅದೃಷ್ಟ ಒಲಿದು ಬಂದಿಲ್ಲ. ಉದ್ಯಮದಲ್ಲಿ ಅವರು ಬೆಳೆದಿರುವುದು ಸಂತೋಷ. ಈ ಮೂಲಕ ಪ್ರವಾಸೋದ್ಯಮಕ್ಕೆ ಬಲ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಶ್ಲಾಘಿಸಿದರು.