ದಾಂಡೇಲಿ:ನಗರದ ಅಂಬೇವಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಹಾಗೂ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಪ್ರಾದೇಶಿಕ ಕಛೇರಿ, ಧಾರವಾಡದ ಸಂಯುಕ್ತಾಶ್ರಯದಲ್ಲಿ ಜರುಗಿದ ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನಾಂಗಗಳ ಸಂಸ್ಕೃತಿ ಕುರಿತು ಒಂದು ದಿನದ ಕಾರ್ಯಾಗಾರ ಹಾಗೂ ಐತಿಹಾಸಿಕ ದಾಖಲೆಗಳ ಪ್ರದರ್ಶನಗಳ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿ, ಆಧುನೀಕರಣ ಮತ್ತು ಜಾಗತೀಕರಣಗಳ ಆಕ್ರಮಣಕ್ಕೆ ತುತ್ತಾಗಿ ಜನಪದ ಕಲೆಗಳು ನಾಶವಾಗುತ್ತಿವೆ. ಬಂಡವಾಳಶಾಹಿ ಜಗತ್ತು ಜಾನಪದ ಕಲೆಗಳನ್ನು ಮಾರಾಟದ ಸರಕಾಗಿ ಬಳಸಿಕೊಳ್ಳುತ್ತಿದೆ. ಜಾನಪದ ಕಲೆಗಳು ತಮ್ಮ ಮೂಲ ಸತ್ವವನ್ನು ಕಳೆದುಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಯುವ ಜನಾಂಗ ತಮ್ಮ ತಮ್ಮ ಬುಡಕಟ್ಟು, ಜಾತಿ, ಕುಲಗಳ ಮೂಲ ಜಾನಪದ ಕಲೆಗಳನ್ನು ಕಲಿಯುವ ಮೂಲಕ ಉಳಿಸಿ ಬೆಳೆಸಿಕೊಂಡು ಹೋಗಬೇಕು. ಇಲ್ಲವಾದರೆ ಜಾನಪದ ಕಲೆಗಳು ಸರ್ವನಾಶವಾಗುತ್ತದೆ ಎಂದು ಅಭಿಪ್ರಾಯಿಸಿದರು.
ನಮ್ಮ ಕಾಲದಲ್ಲಿ ಜಾತಿ, ಧರ್ಮ, ಮತ ಪಂಥಗಳ ಆಧಾರದಲ್ಲಿ ಜನರನ್ನು ಒಡೆಯುವ ಕೆಲಸ ನಡೆಯುತ್ತಿದ್ದು, ಯುವ ಜನಾಂಗ ಒಂದುಗೂಡಿಸುವ ಮೌಲ್ಯವನ್ನು ಅನುಸರಿಸಬೇಕೆಂದರು.
ಸಿದ್ದಿ ಬುಡಕಟ್ಟು ಸಮುದಾಯದ ಸಾಧಕಿ ಜುಲಿಯಾನಾ ಸಿದ್ದಿ, ಸಿದ್ದಿ ಜನಾಂಗದಲ್ಲಿ ಹಂಚಿ ತಿನ್ನುವ ಗುಣವಿದೆ. ಹಲವು ಧರ್ಮಗಳನ್ನು ಅನುಸರಿಸಿದರೂ ಕಲೆಯ ಸಂದರ್ಭದಲ್ಲಿ ಅವರು ಎಲ್ಲ ಧರ್ಮಗಳನ್ನು ಮೀರುತ್ತಾರೆ. ಕಲೆಯೇ ಅವರಿಗೆ ಧರ್ಮವಾಗಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ಮಂಜುಳಾ ಯಲಿಗಾರ ಅವರು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಗೆ ವಿದ್ಯಾರ್ಥಿಗಳು ತಮ್ಮ ಊರಿನ ಪ್ರಾಚೀನ ಸಂಸ್ಕೃತಿಯ ದಾಖಲೆಗಳನ್ನು ಒದಗಿಸಿ ಸಹಕರಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಳಿಯಾಳದ ಆಮಚೋ ಮೋಳ್ ಸಾಂಸ್ಕೃತಿಕ ಕಲಾ ತಂಡದಿಂದ ಸಿದ್ದಿ ನರ್ತನ ಪ್ರದರ್ಶನವಾಯಿತು. ಮಹಾವಿದ್ಯಾಲಯದ ವಿದ್ಯಾರ್ಥಿ ವಿಠ್ಠಲ ದೊಯಿಪೊಡೆ ಹಾಗೂ ಕಲಾ ತಂಡವು ಗೌಳಿ ನೃತ್ಯವನ್ನು ಪ್ರದರ್ಶಿಸಿದರು. ಪ್ರಾಚಾರ್ಯ ಡಾ.ಎಂ.ಡಿ.ಒಕ್ಕೂಟದ ಅಧ್ಯಕ್ಷತೆ ವಹಿಸಿದರು. ಸಂಘಟಕರಾದ ಡಾ.ಬಸವರಾಜ ಎನ್.ಅಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾವ್ಯಾ ಭಟ್ಟ ಅವರು ಪ್ರಾರ್ಥಿಸಿದರು. ಆನಂದ ತಳವಾರ ಸ್ವಾಗತಿಸಿದರು. ಡಾ.ಎನ್.ಎಂ.ಜಂಗೂ ಭಾಯಿ ವಂದಿಸಿದರು. ಡಾ.ಮಂಜುನಾಥ ಚಲವಾದಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಜುಲಿಯಾನಾ ಫರ್ನಾಂಡೀಸ್ ಅವರು ಐತಿಹಾಸಿಕ ದಾಖಲೆಗಳ ಪ್ರದರ್ಶನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕ ವೃಂದ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.