ಹೊನ್ನಾವರ: ತಾಲೂಕಿನಲ್ಲಿ ಖಾಸಗಿ ಕಟ್ಟಡದಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಜನರಿಗೆ ಅನುಕೂಲವಾಗುವಂತೆ ತಾಲೂಕು ಆಡಳಿತ ಸೌಧಕ್ಕೆ ಕೂಡಲೇ ಸ್ಥಳಾಂತರಿಸಬೇಕು. ಕಚೇರಿಯ ಎದುರು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಹಾತ್ಮಾಗಾಂಧಿ ಪ್ರತಿಮೆ ನಿರ್ಮಾಣ ಹಾಗೂ ಸದ್ರಿ ಕಟ್ಟಡದ ಮೇಲ್ಭಾಗದ ಕಟ್ಟಡಕ್ಕೆ ಅನುದಾನ ನೀಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ಜನಪರ ವೇದಿಕೆ, ಸಮಾನ ಮನಸ್ಕ ಸಮೂಹದಿಂದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕು ನದಿ, ಹಳ್ಳ- ಕೊಳ್ಳ, ಗುಡ್ಡಗಾಡು ಪ್ರದೇಶ ಹೊಂದಿರುವ 30 ಗ್ರಾಮ ಪಂಚಾಯತ, ಒಂದು ಪಟ್ಟಣ ಪಂಚಾಯತ, ಒಟ್ಟೂ ಮೂರುವರೆ ಲಕ್ಷ ಜನಸಂಖ್ಯೆಯಿರುವ ಹಿಂದುಳಿದವರು, ಅಲ್ಪಸಂಖ್ಯಾತರು ರೈತರು, ಮೀನುಗಾರರು ವಾಸಿಸುತ್ತಿದ್ದು, ಇವರೆಲ್ಲರೂ ನೂರಾರು ಕಿಲೋಮೀಟರ್ ದೂರದಿಂದ ದಿನನಿತ್ಯದ ಕೆಲಸ ಕಾರ್ಯಗಳಿಗೆ ತಾಲೂಕು ಆಡಳಿತ ಸೌಧಕ್ಕೆ ಆಗಮಿಸುತ್ತಾರೆ. ಇಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಯು ಆಡಳಿತ ಸೌಧಕ್ಕೆ ಈವರೆಗೂ ಸ್ಥಳಾಂತರಿಸಿಲ್ಲ. ಈ ಕಚೇರಿಯು ಖಾಸಗಿ ಕಟ್ಟಡದ ಮೊದಲ ಮಹಡಿಯಲ್ಲಿದ್ದು, ಈ ಕಟ್ಟಡದಲ್ಲಿ ಗಾಳಿ, ಬೆಳಕು, ನೀರು, ಮೂಲ ಸೌಕರ್ಯದಕೊರತೆ, ಇಕ್ಕಟ್ಟಾದ ಸ್ಥಳವಾಗಿದೆ. ಕಚೇರಿಗೆ ಹೋಗಿ ಬರುವ ವೃದ್ಧರಿಗೆ, ಗರ್ಭಿಣಿಯರಿಗೆ, ಮಹಿಳೆಯರಿಗೆ, ಅಂಗವಿಕಲರಿಗೆ, ಅನಾರೋಗ್ಯ ಪೀಡಿತರಿಗೆ ಕಷ್ಟ ಸಾಧ್ಯ. ನಿತ್ಯ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಅಗತ್ಯ ಕಾಗದ ಪತ್ರ ದಾಖಲೆಗಳಿಗಾಗಿ ಭೇಟಿ ನೀಡುತ್ತಾರೆ.ಸರಕಾರದ ಕಾಗದ ಪತ್ರಗಳ ರಕ್ಷಣೆಯಿಂದ ಇಡಲು ಸ್ಥಳದ ಕೊರತೆಯಿದೆ ಎಂದು ತಿಳಿಸಿದ್ದಾರೆ.
ಹಳೆಯ ಇಲಾಖೆಯ ಎಲ್ಲಾ ದಾಖಲೆಗಳನ್ನು ಭದ್ರತಾ ಕೊಠಡಿಗಳಿಲ್ಲದೆ ಎಲ್ಲವೂ ತೆರೆದುಕೊಂಡು ಬಿದ್ದಿವೆ. ಇವೆಲ್ಲವೂ ಶಾರ್ಟ ಸರ್ಕೀಟ್ ಇಲ್ಲವೆ ಬೆಂಕಿ ಅನಾಹುತದಿಂದ ನಾಶವಾಗುವ ಸಾಧ್ಯತೆಯಿದೆ. ಕಚೇರಿ ಅವಧಿಯಲ್ಲಿ ಒಂದೇ ಸಮಯದಲ್ಲಿ ಹಲವರು ಸೇರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದೆ.ಈ ಬಗ್ಗೆ ಹಲವಾರು ವರ್ಷಗಳಿಂದ ಸಾರ್ವಜನಿಕರಿಂದ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೂ ಕಾರ್ಯಗತವಾಗಿರುವುದಿಲ್ಲ. ಆಡಳಿತ ಸೌಧದಲ್ಲಿ ಸಾಕಷ್ಟು ಸ್ಥಳಾವಕಾಶ ಮೂಲ ಸೌಕರ್ಯಗಳಿದ್ದರೂ ಈ ಕುರಿತು ಸೂಕ್ತ ಕ್ರಮಕೈಗೊಂಡಿಲ್ಲ. ಸರಕಾರದ ಇತರಎಲ್ಲಾ ಕಚೇರಿಗಳು ಒಂದೇ ಸೂರಿನಡಿಯಲ್ಲಿ ಆಡಳಿತ ಸೌಧಕ್ಕೆ ಬರಬೇಕಾದರೆ ಸ್ಥಳಾವಕಾಶದ ಕೊರತೆ ಇರುವುದರಿಂದ ಎರಡನೆಯ ಹಂತದಕಟ್ಟಡದ ನಿರ್ಮಾಣಕ್ಕೆಅನುದಾನ ಬರುವಂತೆ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಆಡಳಿತ ಸೌಧದ ಮುಂಭಾಗದಲ್ಲಿ ಶಾಂತಿ, ಅಹಿಂಸೆ, ಸತ್ಯಗಳನ್ನು ಸಾರಿದ ಮಹಾತ್ಮಾ ಗಾಂಧೀಜಿಯವರ ಪ್ರತಿಮೆ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರ ಪ್ರತಿಮೆ ಸ್ಥಾಪಿಸಲು ಅಗತ್ಯಕ್ರಮ ಕೈಗೊಳ್ಳಬೇಕು. ಆಗಸ್ಟ್ 15ರೊಳಗಾಗಿ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಜನರಿಗೆ ಅನುಕೂಲವಾಗುವಂತೆ ಸ್ಥಳಾಂತರಿಸದಿದ್ದರೆ ಸಾರ್ವಜನಿಕರು ಮತ್ತು ಹಲವಾರು ಸಂಘಟನೆಗಳೊಂದಿಗೆ ಧರಣಿ ಸತ್ಯಾಗ್ರಹ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.