ಕುಮಟಾ: ಹೆಗಡೆ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸಿದ್ದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣವಾಗಿದೆ ಎಂದು ಸ್ಥಳೀಯರು ಗ್ರಾಮ ಪಂಚಾಯತಿಗೆ ದೂರು ನೀಡಿರುವ ಘಟನೆ ನಡೆದಿದೆ. ಅಸಲಿಗೆ ಇದು ಪ್ಲಾಸ್ಟಿಕ್ ಅಕ್ಕಿ ಅಲ್ಲ, ಸಾರವರ್ಧಿತ ಅಕ್ಕಿ ಎಂಬುದು ಅಧಿಕಾರಿಗಳನ್ನು ವಿಚಾರಿಸಿದಾಗ ತಿಳಿದುಬಂದಿದೆ.
ಪಡಿತರ ಕೇಂದ್ರಗಳಿಂದ ತಂದಿರುವ ಅಕ್ಕಿಗಳಲ್ಲಿ ಫಳ ಫಳ ಹೊಳೆಯುವಂಥ ಅಕ್ಕಿ ಕಂಡುಬಂದಿದೆ. ನೀರಿನಲ್ಲಿ ತೊಳೆಯುವ ವೇಳೆ ಈ ಅಕ್ಕಿ ನೀರಿನಲ್ಲಿ ತೇಲುತ್ತದೆ. ಜೊತೆಗೆ ಅನ್ನ ಮಾಡಿದರೆ ಕರಗಿ ಅಂಟು ಅಂಟಾಗುತ್ತದೆ. ಇದರಿಂದ ಆತಂಕಗೊಂಡ ಜನ, ಇದು ಪ್ಲಾಸ್ಟಿಕ್ ಅಕ್ಕಿ ಎಂದು ದೂರಿದ್ದರು.
ಈ ಬಗ್ಗೆ ಆಹಾರ ಅಧಿಕಾರಿ ಆರ್.ಸಿ.ಗಟ್ಟುಮನೆ ಸ್ಪಷ್ಟನೆ ನೀಡಿದ್ದು, ಪ್ಲಾಸ್ಟಿಕ್ ಅಕ್ಕಿ ಎಂದು ಜನರು ತಪ್ಪು ತಿಳಿದುಕೊಂಡಿದ್ದಾರೆ. ಅದು ಪ್ಲಾಸ್ಟಿಕ್ ಅಕ್ಕಿ ಅಲ್ಲ. ಕೇಂದ್ರ ಸರ್ಕಾರದ ಆಹಾರದ ಗೋಡೋನ್‌ಗಳಲ್ಲೇ ಸಾರಭರಿತ ಅಕ್ಕಿಯನ್ನು ಮಿಶ್ರಣ ಮಾಡಲಾಗುತ್ತಿದೆ. ಅನ್ನದಲ್ಲಿ ಪೌಷ್ಠಿಕಾಂಶವಿರಬೇಕು ಹಾಗೂ ಅಪೌಷ್ಠಿಕತೆ ನಿವಾರಣೆ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಈ ಅಕ್ಕಿಯನ್ನು ಮಿಶ್ರಣ ಮಾಡಲಾಗುತ್ತಿದೆ. ಇದು ನೀರಿನಲ್ಲಿ ತೇಲುತ್ತದೆ. ಜೊತೆಗೆ ಇದು ಅನ್ನ ಮಾಡುವ ವೇಳೆಯಲ್ಲಿ ಅಂಟು ಅಂಟಾಗಿರುತ್ತದೆ. ಇದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.