ದಾಂಡೇಲಿ: ವೈಟ್ ಬೋರ್ಡ್ ವಾಹನಗಳ ಹಾವಳಿಯಿಂದಾಗಿ ಹಳದಿ ಬೋರ್ಡ್ ವಾಹನಗಳನ್ನು ನಡೆಸುವ ಮಾಲಕರಿಗೆ ಹಾಗೂ ಚಾಲಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಬಗ್ಗೆ ಕಳೆದ 14 ತಿಂಗಳ ಹಿಂದೆ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ಮನವಿಯನ್ನು ನೀಡಿದ್ದರೂ, ಈವರೆಗೆ ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿಲ್ಲ. ಆದ್ದರಿಂದ ಅತ್ಯಂತ ಸಂಕಷ್ಟದಲ್ಲೆ ದಿನ ಕಳೆಯುತ್ತಿರುವ ಹಳದಿ ಬೋರ್ಡ್ ಪ್ರಯಾಣಿಕ ವಾಹನಗಳನ್ನು ನಡೆಸುವ ಮಾಲಕರಿಗೆ ಮತ್ತು ಚಾಲಕರಿಗೆ ನ್ಯಾಯ ಕೊಡಬೇಕೆಂದು ಹಳಿಯಾಳದ ಶ್ರೀಕಿತ್ತೂರು ರಾಣಿ ಚೆನ್ನಮ್ಮ ಟ್ಯಾಕ್ಸಿ ಚಾಲಕರು ಮತ್ತು ಮಾಲಕರ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಬುಧವಾರ ನಗರದಲ್ಲಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಗೆ ಈ ಬಗ್ಗೆ ಮನವಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪದಾಧಿಕಾರಿಗಳಾದ ಅಣ್ಣಪ್ಪ ಕಲಾಲ್, ಸಂತೋಷ್ ಛಲವಾದಿ ಮತ್ತು ಪರಶುರಾಮ ಬಗ್ರೀಕರ, ಸರಕಾರಕ್ಕೆ ನಿಗದಿಯಂತೆ ಅತೀ ಹೆಚ್ಚು ಪ್ರಮಾಣದಲ್ಲಿ ತೆರಿಗೆ ಆಕರಣ ಮಾಡುವುದರ ಜೊತೆಗೆ ಭಾರೀ ಮೊತ್ತದ ವಿಮಾ ಕಂತನ್ನು ಪಾವತಿಸುತ್ತಿರುವ ನಮಗೆ ವೈಟ್ ಬೋರ್ಡ್ ವಾಹನಗಳ ಹಾವಳಿಯಿಂದ ಬಾಡಿಗೆಯೇ ಇಲ್ಲದಂತಾಗಿದೆ. ಸಾರಿಗೆ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸುತ್ತಾ ಬರುತ್ತಿರುವ ನಮಗೆ ನ್ಯಾಯ ನೀಡಬೇಕೆಂದು ಆಗ್ರಹಿಸಿದ್ದಾರೆ.