ದಾಂಡೇಲಿ: ಮಲಗಿದ್ದ ವ್ಯಕ್ತಿಯೋರ್ವನ ಮೇಲೆ ಲಾರಿಯೊಂದು ಹಾಯ್ದು ವ್ಯಕ್ತಿಯೋರ್ವ ಗಂಭೀರ ಗಾಯಗೊಂಡು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಬುಧವಾರ ಬೆಳ್ಳಂಬೆಳಗ್ಗೆ ನಗರದ ಹಳಿಯಾಳ ರಸ್ತೆಯ ಟ್ರಕ್ ಟರ್ಮಿನಲ್ ಸ್ಥಳದಲ್ಲಿ ನಡೆದಿದೆ.
ಟ್ರಕ್ ಟರ್ಮಿನಲ್ ನಿಗದಿಪಡಿಸಿದ್ದ ಜಾಗದಲ್ಲಿ ಈಗಾಗಲೆ ಟ್ರಕ್‌ಗಳು ನಿಲುಗಡೆ ಮಾಡುತ್ತಿವೆ. ಇದೇ ಟ್ರಕ್ ಟರ್ಮಿನಲ್ ಸ್ಥಳದಲ್ಲಿ ಮಲಗಿದ್ದ ವ್ಯಕ್ತಿಯೋರ್ವನ ಮೇಲೆ ತಮಿಳುನಾಡು ನೋಂದಣಿ ಸಂಖ್ಯೆಯ ಲಾರಿಯೊಂದು ಹಾಯ್ದು ಹೋಗಿರುವುದರಿಂದ ಮಲಗಿದ್ದ ವ್ಯಕ್ತಿಯ ತಲೆ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಮೃತ ವ್ಯಕ್ತಿ ಅಂದಾಜು 25ರಿಂದ 30 ವರ್ಷದವನಾಗಿದ್ದು, ಅಪರಿಚಿತನಾಗಿದ್ದಾನೆ. ಮೃತ ವ್ಯಕ್ತಿಯ ವಿವರ, ವಿಳಾಸ ಇನ್ನಷ್ಟೆ ಲಭ್ಯವಾಗಬೇಕಾಗಿದೆ. ಅಪಘಾತ ಪಡಿಸಿದ ಲಾರಿ ಚಾಲಕ ತಮಿಳುನಾಡಿನ ಉಳುಪುರಂ ನಿವಾಸಿ ಸುಕುಮಾರ್ ಸುಂದರಂ ಎಂಬುವವನಾಗಿದ್ದಾನೆ. ಸ್ಥಳಕ್ಕೆ ನಗರ ಠಾಣೆಯ ಪಿಎಸೈ ಕಿರಣ್ ಪಾಟೀಲ ಅವರ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ, ಪರಿಶೀಲನೆಯನ್ನು ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.