ಕುಮಟಾ: ತಾಲೂಕಿನ ಅಘನಾಶಿನಿ ಮಾಸ್ತಿಕಟ್ಟೆಯ ಘಟ್ಟದ ಬಳಿ ಮದುವೆ ಟೆಂಪೊವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 20ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಪಟ್ಟಣದ ನೆಲ್ಲಿಕೇರಿಯ ಮಹಾಸತಿ ಸಭಾಭವನದಲ್ಲಿ ಮದುವೆ ಮುಗಿಸಿ, ವಧುವಿನ ಕಡೆಯವರ ಟೆಂಪೋ ಮನೆಗೆ ತೆರಳುತ್ತಿತ್ತು. ಈ ವೇಳೆ ಅಘನಾಶಿನಿಯ ಮಾಸ್ತಿಕಟ್ಟೆಯ ಘಟ್ಟದ ಬಳಿ ತೆರಳುತ್ತಿದ್ದಾಗ ಪಲ್ಟಿಯಾಗಿ, ರಸ್ತೆ ಪಕ್ಕದ ಕಂದಕಕ್ಕೆ ಉರುಳಿದೆ.
ಟೆಂಪೋದಲ್ಲಿ ಪ್ರಯಾಣಿಕರ ಸಂಖ್ಯೆ ಜಾಸ್ತಿಯಿದ್ದ ಕಾರಣ, ಘಟ್ಟ ಏರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ, ಟೆಂಪೋ ಹಿಮ್ಮುಖವಾಗಿ ಚಲಿಸಿದ ಪರಿಣಾಮ ಪಲ್ಟಿಯಾಗಿದೆ. ಟೆಂಪೊದಲ್ಲಿದ್ದ ಸುಮಾರು 20 ಮಂದಿಗೆ ಗಾಯಗಳಾಗಿದ್ದು, ಅದರಲ್ಲಿ ಏಳೆಂಟು ಮಂದಿಗೆ ಗಂಭೀರ ಗಾಯಗಳಾಗಿವೆ.
ಅಘನಾಶಿನಿಯ ಮೇಲಿನಕೇರಿ ನಿವಾಸಿಗಳಾದ ನಿರ್ಮಲ ಗೌಡ, ತಿಮ್ಮಪ್ಪ ಗೌಡ, ಕಮಲ ಗೌಡ, ಪಾರ್ವತಿ ಗೌಡ, ಗಣಪಿ ಗೌಡ, ಕನ್ನೆ ಗೌಡ, ತಿಮ್ಮಕ್ಕ ಗೌಡ ಎಂಬುವವರು ಗಂಭೀರ ಗಾಯಗೊಂಡಿದ್ದು, ಇವರೆಲ್ಲರನ್ನು ಸ್ಥಳೀಯರ ಸಹಕಾರದಿಂದ ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಗಂಭೀರ ಗಾಯಗೊಂಡಿದ್ದವರ ಪೈಕಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಸರ್ಕಾರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಪಲ್ಟಿಯಾಗಿ ಕಂದಕಕ್ಕೆ ಬಿದ್ದ ಟೆಂಪೊವನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಗಿದೆ. ಅಪಘಾತ ನಡೆದ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದರಿಂದ ಪ್ರಯಾಣಿಕರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಅನುಕೂಲವಾಯಿತು. ಘಟನೆ ಕುರಿತು ತಿಳಿಯುತ್ತಿದ್ದಂತೆ ಕುಮಟಾ ಶಾಸಕ ದಿನಕರ ಶೆಟ್ಟಿ ಕುಮಟಾ ಆಸ್ಪತ್ರೆಗೆ ದೌಡಾಯಿಸಿದರು. ಈ ವೇಳೆ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದು ಅಗತ್ಯ ಚಿಕಿತ್ಸೆಯನ್ನು ಒದಗಿಸುವಂತೆ ಆಸ್ಪತ್ರೆಯ ವೈದ್ಯರಿಗೆ ಸೂಚನೆ ನೀಡಿದ್ದಾರೆ. ಈ ಅಪಘಾತದ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.