• Slide
    Slide
    Slide
    previous arrow
    next arrow
  • ಕಾರವಾರ-ಗೋವಾದ ಮೇಲೆ ಬೋಯಿಂಗ್ ಸೂಪರ್ ಹಾರ್ನೆಟ್‌ಗಳ ಹಾರಾಟ

    300x250 AD

    ಕಾರವಾರ: ತನ್ನ ಕಾರ್ಯಾಚರಣೆಯ ಸಾಮರ್ಥ್ಯವನ್ನು ಪ್ರದರ್ಶಿಸಲು ಭಾರತಕ್ಕೆ ಆಗಮಿಸಿರುವ ಎರಡು ಬೋಯಿಂಗ್ ಎಫ್/ಎ-18ಇ ಸೂಪರ್ ಹಾರ್ನೆಟ್ ಯುದ್ಧ ವಿಮಾನಗಳಲ್ಲಿ ಒಂದು ಮಂಗಳವಾರ ಮತ್ತು ಬುಧವಾರ ಕಾರವಾರ- ಗೋವಾ ವ್ಯಾಪ್ತಿಯಲ್ಲಿ ಹಾರಾಟ ನಡೆಸಿದ್ದು, ಫೊಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಈ ಎರಡು ಜೆಟ್‌ಗಳು ಮೇ 20ರಂದು ಭಾರತಕ್ಕೆ ಬಂದಿದ್ದವು. ವಿಮಾನದ ಪ್ರಯೋಗಗಳು ಒಂದು ವಾರದವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದ್ದು, ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ಗೆ ಶೀಘ್ರದಲ್ಲೇ ನಿಯೋಜನೆಗೊಳ್ಳಲಿರುವ 26 ಯುದ್ಧವಿಮಾನಗಳ ಪೈಕಿ ಈ ಅಮೆರಿಕಾ ನಿರ್ಮಿತ ಕ್ರಾಫ್ಟ್ ಕೂಡ ಒಂದಾಗಿದೆ. ಭಾರತೀಯ ನೌಕಾಪಡೆಯು ಗೋವಾದ ಐಎನ್‌ಎಸ್ ಹಂಸಾದಲ್ಲಿರುವ ತೀರ ಆಧಾರಿತ ಪರೀಕ್ಷಾ ಸೌಲಭ್ಯದಲ್ಲಿ (ಎಸ್‌ಬಿಟಿಎಫ್) ಬೋಯಿಂಗ್ ಎಫ್/ಎ-18ಇ ಸೂಪರ್ ಹಾರ್ನೆಟ್ ಕ್ಯಾರಿಯರ್ ಆಧಾರಿತ ಮಲ್ಟಿ-ರೋಲ್ ಫೈಟರ್‌ಗಳ ಹಾರಾಟದ ಪ್ರಯೋಗಗಳನ್ನು ಪ್ರಾರಂಭಿಸಲಿದೆ ಎಂದು ಈ ಹಿಂದೆ ವರದಿಯಾಗಿತ್ತು. ಅದರಂತೆ ಇದೀಗ ಎಫ್-18 ಗೋವಾ- ಕಾರವಾರ ವ್ಯಾಪ್ತಿಯಲ್ಲಿ ಹಾರಾಟ ನಡೆಸಿರುವುದು ಬೆಳಕಿಗೆ ಬಂದಿದೆ.

    ನಾಲ್ಕು ವರ್ಷಗಳ ಹಿಂದೆ ಭಾರತೀಯ ನೌಕಾಪಡೆಯು ತನ್ನ ವಿಮಾನ ವಾಹಕ ನೌಕೆಗಳಿಗಾಗಿ 57 ಮಲ್ಟಿ- ರೋಲ್ ಯುದ್ಧ ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ಈ ಪೈಕಿ ರಫೇಲ್ ಯುದ್ಧ ವಿಮಾನದ ಹಾರಾಟದ ಪ್ರಯೋಗಗಳನ್ನು ಜನವರಿಯಲ್ಲಿ ನಡೆಸಿತ್ತು. ಇನ್ನು ಐಎನ್‌ಎಸ್ ವಿಕ್ರಾಂತ್‌ಗಾಗಿ ಫೈಟರ್ ಜೆಟ್‌ಗಳ ಒಂದು ಬ್ಯಾಚ್ ಅನ್ನೇ ಖರೀದಿಸಲು ನೌಕಾಪಡೆ ಯೋಜಿಸಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15ರಂದು ಕಾರ್ಯಾಚರಣೆಗೆ ನಿಯೋಜಿಸಲಿದ್ದಾರೆ.

    ಉತ್ತರದಲ್ಲಿ ಅಂಬಾಲಾ ಮತ್ತು ಪಶ್ಚಿಮ ಬಂಗಾಳದ ಹಶಿಮಾರಾದಲ್ಲಿ ಎರಡು ಪ್ರಮುಖ ನಿರ್ವಹಣಾ ನೆಲೆಗಳೊಂದಿಗೆ ಭಾರತೀಯ ವಾಯುಪಡೆಗಾಗಿ ಭಾರತವು ಈಗಾಗಲೇ 36 ರಫೇಲ್ ಮಲ್ಟಿ- ರೋಲ್ ಯುದ್ಧವಿಮಾನಗಳನ್ನು ಖರೀದಿಸಿದೆ. ರಫೇಲ್ (ಡಸಾಲ್ಟ್, ಫ್ರಾನ್ಸ್), ಎಫ್-೧೮ ಸೂಪರ್ ಹಾರ್ನೆಟ್ (ಬೋಯಿಂಗ್, ಯುಎಸ್), ಮಿಗ್- ೨೯ಕೆ (ರಷ್ಯಾ) ಮತ್ತು ಗ್ರಿಪೆನ್ (ಸಾಬ್, ಸ್ವೀಡನ್) ಸೇರಿದಂತೆ ನಾಲ್ಕು ವಿಮಾನಗಳ ಒಪ್ಪಂದ ವಿಚಾರ ವಿವಾದದಲ್ಲಿದ್ದವು. ಪ್ರಸ್ತುತ, ನೌಕಾಪಡೆಯು ತನ್ನ ಏಕೈಕ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯದಿಂದ ರಷ್ಯಾ ಮೂಲದ ಮಿಗ್-೨೯ಕೆ ಯುದ್ಧವಿಮಾನಗಳನ್ನು ಕಾರ್ಯಾಚರಿಸುತ್ತಿದೆ. ನೌಕಾಪಡೆಯು ಐಎನ್‌ಎಸ್ ವಿಕ್ರಾಂತ್‌ಗಾಗಿ ೨೬ ವಾಹಕ- ಆಧಾರಿತ ಮಲ್ಟಿ- ರೋಲ್ ಫೈಟರ್‌ಗಳನ್ನು ಖರೀದಿಸುವ ನಿರೀಕ್ಷೆಯಿದ್ದು, ಇದರಲ್ಲಿ ಎರಡು ಆಸನಗಳ ಸಾಮರ್ಥ್ಯದ ಎಂಟು ವಿಮಾನಗಳನ್ನು ಹಾರಾಟದ ತರಬೇತಿ ಮತ್ತು ಕಾರ್ಯಾಚರಣೆಗಾಗಿ ಬಳಸಲಾಗುತ್ತದೆ.

    ಏನಿದು ಸೂಪರ್ ಹಾರ್ನೆಟ್?:ಬೋಯಿಂಗ್ ಸೂಪರ್ ಹಾರ್ನೆಟ್ ಒಂದು ಈಗಾಗಲೇ ಸಾಬೀತುಪಡಿಸಿರುವ ಶಸ್ತ್ರ ವೇದಿಕೆಯಾಗಿದೆ. 11 ಹಾರ್ಡ್ಪಾಯಿಂಟ್‌ಗಳನ್ನು ಹೊಂದಿರುವ ಆಂತರಿಕ ರೋಟರಿ ಫಿರಂಗಿಯೊಂದಿಗೆ ಗಾಳಿಯಿಂದ ಗಾಳಿಗೆ, ಗಾಳಿಯಿಂದ ಮೇಲ್ಮೈ ಕ್ಷಿಪಣಿಗಳನ್ನು ಮತ್ತು ಲೇಸರ್-ಮಾರ್ಗದರ್ಶಿತ ಬಂಕರ್-ಬಸ್ಟಿಂಗ್ ಬಾಂಬ್‌ಗಳನ್ನು ಸಾಗಿಸಲು ಅನುಕೂಲತೆ ಹೊಂದಿದೆ.

    300x250 AD

    ಸೂಪರ್ ಹಾರ್ನೆಟ್ ಮತ್ತು ರಫೇಲ್-ಎಂ ಎರಡನ್ನೂ ಐಎನ್‌ಎಸ್ ವಿಕ್ರಾಂತ್ ಅಥವಾ ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಬಳಸಬಹುದು. ಇದು ವಿಮಾನವಾಹಕ ನೌಕೆಯಿಂದ ವಿಮಾನಗಳ ಉಡಾವಣೆ ಮತ್ತು ಲ್ಯಾಂಡಿಂಗ್ ಗಾಗಿ ಶಾರ್ಟ್ ಟೇಕ್-ಆಫ್ ಆದರೆ ಅರೆಸ್ಟ್ ರಿಕವರಿ ತಂತ್ರಜ್ಞಾನವನ್ನು ಬಳಸುತ್ತದೆ. ಈ ತಂತ್ರಜ್ಞಾನವನ್ನು ರಷ್ಯಾದ ಮತ್ತು ಚೀನಾದ ವಿಮಾನವಾಹಕ ನೌಕೆಗಳು ಸಹ ಬಳಸುತ್ತವೆ.

    ಒಂದುವೇಳೆ ಭಾರತೀಯ ನೌಕಾಪಡೆಯು ಈ ಸೂಪರ್ ಹಾರ್ನೆಟ್‌ಗಳನ್ನು ಖರೀದಿಸುವ ಪ್ರಕ್ರಿಯೆ ಯಶಸ್ವಿಯಾದರೆ ಈ ಬೆಳವಣಿಗೆ ಅಮೆರಿಕಾದೊಂದಿಗೆ ಭಾರತದ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ.

    ಇಂದು ಕಾರವಾರಕ್ಕೆ ರಕ್ಷಣಾ ಸಚಿವ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಾಲೂಕಿನ ಅರಗಾ ಗ್ರಾಮದ ಕದಂಬ ನೌಕಾನೆಲೆಗೆ ಭೇಟಿ ನೀಡಲಿದ್ದಾರೆ.

    ಗೋವಾಕ್ಕೆ ಆಗಮಿಸಿ ಅಲ್ಲಿಂದ ಕದಂಬ ನೌಕಾನೆಲೆಗೆ ಅವರು ಆಗಮಿಸಲಿದ್ದು, ಎರಡು ದಿನಗಳ ಕಾಲ ನೌಕಾನೆಲೆಯಲ್ಲಿ ತಂಗಲಿದ್ದಾರೆ. ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಬೋಯಿಂಗ್ ವಿಮಾನದ ಹಾರಾಟ ವೀಕ್ಷಿಸಲಿದ್ದಾರೆನ್ನಲಾಗಿದೆ. ನೌಕಾ ಸಿಬ್ಬಂದಿಯೊಂದಿಗೆ ಸಂಜೆ ಭೋಜನಕೂಟದಲ್ಲಿ ಪಾಲ್ಗೊಂಡು ಬಳಿಕ ದೆಹಲಿಗೆ ವಾಪಸ್ಸಾಗಲಿದ್ದಾರೆಂಬ ಮಾಹಿತಿ ಇದೆ. ಸಚಿವರ ಆಗಮನದ ಹಿನ್ನೆಲೆಯಲ್ಲಿ ನೌಕಾನೆಲೆ ಸುತ್ತಮುತ್ತ ಬಿಗಿ ಬಂದೋಬಸ್ತ್ ವಹಿಸಲಾಗಿದೆ.


    Share This
    300x250 AD
    300x250 AD
    300x250 AD
    Leaderboard Ad
    Back to top