ಹೊನ್ನಾವರ: ತಾಲೂಕಿನ ಉಪ್ಪೋಣಿ ಉರ್ದು ಭಾಗದಲ್ಲಿ ಸಿಆರ್‌ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕ ನಾಸೀರ್ ಖಾನ್‌ರನ್ನು ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಹರೀಶ ಗಾಂವಕರ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಉಪ್ಪೋಣಿಯ ಉರ್ದು ಸಿಆರ್‌ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನಾಸೀರ್ ಖಾನ್ ಕಳೆದ ಒಂದು ವರ್ಷದಿಂದ ಉರ್ದು ಶಾಲೆಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕ, ಶಿಕ್ಷಕಿಯರಿಗೆ ಮಾನಸಿಕ ಹಿಂಸೆ ಹಾಗೂ ದೌರ್ಜನ್ಯ ನಡೆಸುತ್ತಿದ್ದು, ಅಸಭ್ಯವಾಗಿ ವರ್ತನೆ ಮಾಡುತ್ತಾ, ಸರಿಯಾದ ಸಮಯಕ್ಕೆ ತಲುಪಬೇಕಾದ ಮಾಹಿತಿಯನ್ನು ಇಲಾಖೆಗೆ ತಲುಪಿಸುತ್ತಿರಲಿಲ್ಲ ಎನ್ನಲಾಗಿದೆ. ಅವರ ವರ್ತನೆಯಿಂದ ಉಪ್ಪೋಣಿ ಕ್ಲಸ್ಟರಿನ ಶಿಕ್ಷಕ, ಶಿಕ್ಷಕಿಯರು ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಮನವಿ ನೀಡಿದ್ದರು.
ಈ ಹಿಂದೆಯು ಕೂಡ ಈತ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ವಲ್ಕಿ ಶಾಲೆಯಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿರುವಾಗ ಗಂಭೀರ ಆರೋಪಗಳಿಂದ 6 ತಿಂಗಳು ಇಲಾಖೆ ಅಮಾನತ್ತಿನಲ್ಲಿ ಇರಿಸಿತ್ತು. ಈಗಲೂ ಕೂಡ ಅದೇ ಚಾಳಿ ಮುಂದುವರಿಸಿದ್ದು, ಮಹಿಳಾ ಶಿಕ್ಷಕರೊಡನೆ ಅಸಭ್ಯವಾಗಿ ವರ್ತನೆ ಮಾಡುವುದಲ್ಲದೇ ಮಹಿಳಾ ಶಿಕ್ಷಕಿಯರೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿದ್ದಾನೆಂದು ಆರೋಪಿಸಲಾಗಿದೆ. ವರ್ತನೆ ಇದೇ ರೀತಿ ಮುಂದುವರೆದರೆ ನಾವೆಲ್ಲ ಶಿಕ್ಷಕಿಯರು ರಸ್ತೆ ಮಧ್ಯದಲ್ಲಿ ತರಾಟೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಶಿಕ್ಷಕರು ಬರುವ ದಾರಿಯಲ್ಲಿ ತಡೆದು ಸಾರ್ವಜನಿಕರ ಎದುರು ಕೂಗಾಡುವುದು, ಅಲ್ಲದೇ ಶಾಲಾ ಮಧ್ಯದಲ್ಲಿ ಆರೋಗ್ಯದಲ್ಲಿ ಏರುಪೇರಾದ ಸಂದರ್ಭದಲ್ಲಿ ಅವಧಿಗಿಂತ ಮುಂಚಿತವಾಗಿ ಮುಖ್ಯ ಶಿಕ್ಷಕರಲ್ಲಿ ಅನುಮತಿ ಲೇಖಿಯ ಮೂಲಕ ಪಡೆದು ಬಂದರೂ ಸಹ ತಡೆದು ಮಹಿಳಾ ಶಿಕ್ಷಕಿಯರು ರಸ್ತೆಯಲ್ಲಿ ಬರುವಾಗ ವರ್ಗದ ಕೋಣೆಯಲ್ಲಿ ಪಾಠ ಮಾಡುವಾಗ ಫೋಟೋ ಹಾಗೂ ವಿಡಿಯೋ ಮಾಡಿ ಅಶ್ಲೀಲವಾಗಿ ವರ್ತಿಸುತ್ತಾರೆ ಎನ್ನುವ ಬಹು ಗಂಭೀರ ಆರೋಪ ಮಾಡಲಾಗಿತ್ತು. ಅಲ್ಲದೇ ವಿಡಿಯೋ ಮಾಡಿ ನಿಮ್ಮ ಮನೆಗೆ ಕಳುಹಿಸುತ್ತೇನೆಂದು ಬೆದರಿಕೆ ಹಾಕುತ್ತಾರೆ ಎಂದು ಶಿಕ್ಷಕರು ಮಾಡಿರುವ ಗಂಭೀರ ಆರೋಪ ಈ ಶಿಕ್ಷಕನಿಗೆ ಮುಳುವಾಗಿದ್ದು, ಇದೀಗ ಇವರನ್ನು ಮತ್ತೆ ಅಮಾನತು ಮಾಡಲಾಗಿದೆ.