ಹೊನ್ನಾವರ: ಮುಂಗಾರು ಪೂರ್ವ ಈಗಾಗಲೇ ಅಕಾಲಿಕ ಮಳೆ ಜಿಲ್ಲೆಯ ರೈತರನ್ನ ಕಾಡುತ್ತಿರುವ ಬೆನ್ನಲ್ಲೇ ಬೆಳೆಗಳಿಗೆ ಸೈನಿಕ ಹುಳುಗಳ ಕಾಟ ಶುರುವಾಗಿದ್ದು ಕೃಷಿಕರನ್ನ ಚಿಂತೆಗೀಡು ಮಾಡಿದೆ.
ತಾಲ್ಲೂಕಿನ ಗ್ರಾಮಗಳಾದ ಕಡ್ನೀರು, ಹೊದ್ಕೆ, ಶಿರೂರು, ತೊರಗೋಡು, ಬಾಸಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸೈನಿಕ ಹುಳುವಿನ ಬಾಧೆ ಅತಿಯಾಗಿದ್ದು, ಗದ್ದೆಗಳಲ್ಲಿ ಅಕಾಲಿಕ ಮಳೆಗೆ ಬೆಳೆದ ಹುಲ್ಲುಗಳು ಹಸುಗಳಿಗೆ ಸಿಗದೆ ಹುಳುವಿನ ಪಾಲಾಗುತ್ತಿದೆ. ಕೇವಲ ಎರಡ್ಮೂರು ದಿನಗಳಲ್ಲಿ ನೂರಾರು ಎಕರೆಯಲ್ಲಿನ ಹುಲುಸಾಗಿ ಬೆಳೆದ ಹುಲ್ಲುಗಳು ಹುಳಕ್ಕೆ ಆಹುತಿಯಾಗಿದೆ. ಕೃಷಿ ಜಮೀನಿನ ತುಂಬೆಲ್ಲಾ ಹುಳುಗಳು ದಾಳಿ ನಡೆಸುತ್ತಿದ್ದು, ಮನೆಯ ಸುತ್ತಮುತ್ತಲೂ ಇದು ಆವರಿಸಿ ಆತಂಕ ಸೃಷ್ಟಿಮಾಡಿದೆ.
ಕೃಷಿ ಇಲಾಖೆಯ ಅಧಿಕಾರಿಗಳು ಕೀಟ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ರೈತರಿಗೆ ವಿವರಿಸಿದ್ದಾರೆ. ಹತ್ತು- ಹದಿನೈದು ವರ್ಷಗಳಿಗೊಮ್ಮೆ ಈ ಕೀಟ ದಾಳಿ ನಡೆಸಲಿದ್ದು, ಈ ಬಾರಿ ಹೊನ್ನಾವರದ ಹಲವು ಗ್ರಾಮಗಳಲ್ಲಿ ಇವುಗಳು ಲಗ್ಗೆ ಇಟ್ಟಿವೆ. ಹೀಗಾಗಿ ಇವುಗಳಿಗೆ ವಿಷವುಣಿಸುವ ಬಗ್ಗೆ ಈಗಾಗಲೇ ರೈತರಿಗೆ ಮಾಹಿತಿ ನೀಡಲಾಗಿದೆ. ಸರಿಯಾಗಿ ಮಳೆಯಾದರೆ ಇವುಗಳ ಸಂಖ್ಯೆ ಕಡಿಮೆಯಾಗಲಿವೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಹೇಳಿದ್ದಾರೆ.