ಅಂಕೋಲಾ: ನಾಗರಾಜ ನಾಯಕ ಬಿ.ಕೆ.ಹರಿಪ್ರಸಾದರವರ ಹೇಳಿಕೆಗಳನ್ನು ಖಂಡಿಸಿ, ಆರ್‌ಎಸ್‌ಎಸ್ ಅನ್ನು ಮೆಚ್ಚಿಸಲು ಹೋಗಿ ಇಂಗುತಿಂದ ಮಂಗನಂತಾಗಿದ್ದಾರೆ. ಸಂವಿಧಾನ ಬದಲಾಯಿಸಲು ಹೊರಟವರು ಯಾರು, ಆ ಹೇಳಿಕೆಯನ್ನು ನೀಡಿದವರು ಯಾರು ಎಂಬುದನ್ನು ನೆನಪಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅವರು ತಜ್ಞರ ಸಲಹೆ ಪಡೆದರೆ ಒಳ್ಳೆಯದು ಎಂದು ಕಾಂಗ್ರೆಸ್ ಮುಖಂಡ ಮಂಜುನಾಥ ನಾಯ್ಕ ಹೇಳಿದ್ದಾರೆ.
‘ಸಂವಿಧಾನದ ಬದಲು ಕಾಂಗ್ರೆಸ್‌ಗೆ ಷರಿಯತ್ ಕಾನೂನು ಬೇಕಿದೆ’ ಎಂದಿದ್ದ ಬಿಜೆಪಿ ವಕ್ತಾರ ನಾಗರಾಜ ನಾಯಕರ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಬಿ.ಕೆ.ಹರಿಪ್ರಸಾದರವರು ಮಾಧ್ಯಮಗಳೊಂದಿಗೆ ಮಾತನಾಡುವ ಅನೇಕ ಸಂದರ್ಭಗಳಲ್ಲಿ ತಮ್ಮ ಧರ್ಮ ಸಂವಿಧಾನ ಎಂದಿದ್ದರು. ಅವರು ಅಂಬೇಡ್ಕರರ ಸಂವಿಧಾನವನ್ನು ಗೌರವಿಸುವ ನಾಯಕರು. ಇಂಥ ನಾಯಕರನ್ನು ಟೀಕಿಸುವುದರಿಂದ ತಾವು ಬಿಜೆಪಿ, ಆರ್‌ಎಸ್‌ಎಸ್ ಅನ್ನು ಮೆಚ್ಚಿಸಬಹುದೆಂದು ನಾಗರಾಜ ನಾಯಕರವರು ತಿಳಿದಂತಿದೆ. ಇದೇ ಸಂವಿಧಾನ ಕಾಂಗ್ರೆಸ್ ನಾಯಕರನ್ನು ಜೈಲಿಗೆ ಕಳುಹಿಸಿದೆ ಎಂದು ಟೀಕಿಸುವ ನಾಗರಾಜ ನಾಯಕ, ಇದೇ ಸಂವಿಧಾನದಿಂದ ಬಿಜೆಪಿಯ ಯಾವೆಲ್ಲ ನಾಯಕರು ಗಡಿಪಾರಾಗಿದ್ದರು, ಜೈಲಿಗೆ ಹೋಗಿದ್ದರು ಎಂಬುದನ್ನು ಮರೆತಿರುವಂತಿದೆ. ಇದು ಅವರು ಎಷ್ಟರ ಮಟ್ಟಿಗೆ ಅಪ್ರಬುದ್ಧ ಬಿಜೆಪಿ ವಕ್ತಾರ ಎಂಬುದನ್ನು ತೋರಿಸಿಕೊಡುತ್ತದೆ . ಇಂಥಾ ವಕ್ತಾರರ ಅವಶ್ಯಕತೆ ಬಿಜೆಪಿ ಬೇಕಾಗಿದೆ ಎಂದರೆ ಜಿಲ್ಲೆಯಲ್ಲಿ ಬಿಜೆಪಿ ಯಾವ ರೀತಿ ಅಧೋಗತಿಗಿಳಿದಿದೆ ಎಂದು ತೋರಿಸಿಕೊಟ್ಟಿದೆ ಎಂದಿದೆ.
ಭ್ರಷ್ಟಾಚಾರದ ಬೀಜ ಬಿತ್ತಿರುವ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷಕ್ಕಿದೆ ಎಂದು ಪತ್ರಿಕಾಗೋಷ್ಠಿ ನಡೆಸುವ ಬಿಜೆಪಿ ವಕ್ತಾರ ನಾಗರಾಜ ನಾಯಕ, ೪೦% ಭ್ರಷ್ಟಾಚಾರದ ಸರಕಾರ ಯಾವುದು, ನೇಮಕಾತಿಯಲ್ಲಿ ಭ್ರಷ್ಟಾಚಾರದ ಬೀಜ ಬಿತ್ತಿರುವವರು ಯಾರು ಎಂಬುದನ್ನು ತಿಳಿದು ಮಾತನಾಡಿದರೆ ಒಳ್ಳೆದಿತ್ತು.
ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದಲ್ಲಿ ಆಡಳಿತಕ್ಕೆ ಬರದಿದ್ದರೆ ದಿವಾಳಿಯಾಗುತ್ತಿತ್ತು ಎನ್ನುವ ನಾಗರಾಜ ನಾಯಕ, ಗ್ಯಾಸ್, ಡೀಸೆಲ್, ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದ್ದರಿಂದ ಜನಸಾಮಾನ್ಯರು, ಕಾರ್ಮಿಕರು, ರೈತರು ತೊಂದರೆ ಅನುಭವಿಸುತ್ತಿರುವ ಬಗ್ಗೆ ಮತ್ತು ಲಕ್ಷಾನುಗಟ್ಟಲೆ ಉದ್ಯೋಗ ಸೃಷ್ಟಿ ಮಾಡುತ್ತೇವೆಂದು ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿ ಮಾಡದೇ ಸರ್ಕಾರಿ ಸ್ವಾಮ್ಯದ ಅನೇಕ ಉದ್ಯಮಗಳು ಖಾಸಗೀಕರಣವಾಗಿ ಹಿಂದುಳಿದವರು, ದಲಿತರು ಕಷ್ಟ ಅನುಭವಿಸುತ್ತಿದ್ದ ಬಗ್ಗೆ, ಅಸಂಖ್ಯಾತ ಜನರು ಉದ್ಯೋಗ ಕಳೆದುಕೊಂಡ ಬಗ್ಗೆ ಈ ವಕ್ತಾರರು ಜಾಣ ಕುರುಡರಾಗಿದ್ದಾರೆ ಎಂದಿದ್ದಾರೆ.
ಬಿಜೆಪಿ ಸರ್ಕಾರ ಸೌಹಾರ್ದಯುತ, ಸಹಬಾಳ್ವೆಯ ಜೀವನ ನಡೆಸುವ ಈ ನಾಡಿನಲ್ಲಿ ದ್ವೇಷ ಭಾವನೆ ಮೂಡಿಸುತ್ತಿದೆ. ಇದನ್ನು ವಕ್ತಾರರು ಅರಿತುಕೊಂಡರೆ ಒಳ್ಳೆಯದಿತ್ತು. ಆರ್‌ಎಸ್‌ಎಸ್ ಸಂಘಟನೆಯನ್ನು ವಿರೋಧಿಸುವ ಬಿ.ಕೆ.ಹರಿಪ್ರಸಾದರವರು ಮುಖಾಮುಖಿ ಬರಲಿ, ನಾವು ಉತ್ತರ ಕೊಡುತ್ತೇವೆಂದು ಪತ್ರಿಕಾಗೋಷ್ಠಿ ನಡೆಸಿದ ನಾಗರಾಜ ನಾಯಕರವರು ಮರೆವಿನ ಕಾಯಿಲೆಯನ್ನು ಗುಣಪಡಿಸಿಕೊಂಡು, ಜಾಣ ಕುರುಡರಂತೆ ವರ್ತಿಸುವುದನ್ನು ಬಿಟ್ಟು ಬಂದರೆ ಈ ಜಿಲ್ಲೆಯವರೇ ಅವರಿಗೆ ಮುಖಾಮುಖಿಯಾಗುತ್ತಾರೆ ಎಂದು ತಿಳಿಸಿದ್ದಾರೆ.
ನಾಗರಾಜ ನಾಯಕರವರು ಬಿ.ಕೆ.ಹರಿಪ್ರಸಾದರವರಂಥ ನಾಯಕರ ಹೇಳಿಕೆಗಳಿಗೆ ಪತ್ರಿಕಾಗೋಷ್ಠಿ ನಡೆಸಿ ಆರ್‌ಎಸ್‌ಎಸ್ ಸಂಘಟನೆಯನ್ನು, ಬಿಜೆಪಿಯನ್ನು ಒಲಿಸಲು ಹೋಗಿ ಇಂಗು ತಿಂದ ಮಂಗನಂತಾಗಿದ್ದಾರೆ. ಇಂಥ ವಕ್ತಾರರ ಅವಶ್ಯಕತೆ ಬಿಜೆಪಿಗಿದೆಯೇ ಎಂಬ ಬಗ್ಗೆ ಬಿಜೆಪಿ ಚಿಂತನೆ ಮಾಡಬೇಕಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.