ಶಿರಸಿ: ಜಿಲ್ಲಾ ರೈತರಿಗೆ ಸರಳವಾಗಿ, ಸುಲಭವಾಗಿ ಈ ಹಿಂದಿನಂತೆ ಬೆಳೆ ಸಾಲ ಸಿಗುವಂತೆ ಮಾಡಲು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ ಕಂದಾಯ, ಸಹಕಾರಿ, ಕಾರ್ಮಿಕ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಜಿಲ್ಲೆಯ ಎಲ್ಲ ರೈತರು ಪ್ರತಿ ವರ್ಷ ತಮ್ಮ ತಮ್ಮ ಕ್ಷೇತ್ರಕ್ಕೆ ಅನುಗುಣವಾಗಿ ಸಾಲವನ್ನು ಪಡೆದುಕೊಳ್ಳುತ್ತಿದ್ದರಿಂದ ಈವರೆಗೂ ಬಹುತೇಕ ರೈತರು ತಮ್ಮ ಪಹಣಿ ಪತ್ರಿಕೆಯಲ್ಲಿ ಯಾರ ಹೆಸರಿದ್ದರೂ ಅವರಿಂದ ಜಿ.ಪಿ.ಎ ಪಡೆದುಕೊಂಡು ಅದರ ಆಧಾರದ ಮೇಲೆ ಬೆಳೆ ಸಾಲವನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಈ ವರ್ಷದ ನಿಯಮ ಬದಲಾವಣೆಯಿಂದಾಗಿ ಸಾಲ ಪಡೆದುಕೊಳ್ಳುವ ರೈತರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಕಳೆದ ವರ್ಷ ತೆಗೆದುಕೊಂಡ ಎಲ್ಲ ಬೆಳೆಸಾಲದ ಹಣವನ್ನು ಭರಣ ಮಾಡಿದ್ದಾರೆ. ಆದರೆ ಈಗ ಪುನಃ ಸಾಲ ಪಡೆದುಕೊಳ್ಳಲಾಗದೇ ತುಂಬಾ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ತಿಳಿಸಿದ್ದಾರೆ.
ಸರ್ಕಾರ ಈ ವರ್ಷ ಎಲ್ಲ ರೈತರು ತಮ್ಮ ತಮ್ಮ ಸರ್ವೇ ನಂಬರ್‌ಗಳನ್ನು ಫ್ರುಟ್ ಆಪ್‌ನಲ್ಲಿ ಲೋಡ್ ಆಗದೇ ತಮಗೆ ಸಾಲ ನೀಡಲು ಬರಲಾರದು ಎಂಬ ನಿಯಮ ರೈತನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅದೇ ರೀತಿ ಸಾಲಗಾರರು ಪಹಣೆ ಪತ್ರಿಕೆಯಲ್ಲಿ ಹೆಸರಿದ್ದರೂ ಅವರಿಗೆ ಸಾಲ ಪಡೆದುಕೊಳ್ಳಲು ಕಷ್ಟವಾಗುತ್ತಿದೆ. ಅನೇಕ ರೈತರು ತಮ್ಮ ತಮ್ಮ ಸಾಮಾಹಿಕದಾರರರಿಂದ ಪವರ್ ಆಫ್ ಅಟಾರ್ನಿ ಪಡೆದುಕೊಂಡು ಸಾಲವನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಈಗ ರಿಕಾರ್ಡ್ನಲ್ಲಿ ಹೆಸರಿದ್ದಾಗ ಅವರಿಗೆ ಸಾಲ ಪಡೆದುಕೊಳ್ಳಲು ತೊಡಕಾಗುತ್ತಿದೆ. ಪವರ್ ಆಫ್ ಅಟಾರ್ನಿ ಕಾಯ್ದೆಯ ವಿರುದ್ಧ ಈಗಿನ ನಿಯಮ ಮಾಡಲಾಗಿದೆ. ಕಾರಣ ತಾಲೂಕಿನ ಎಲ್ಲಾ ರೈತರಿಗೆ ಬೆಳೆ ಸಾಲ ಪಡೆದುಕೊಳ್ಳಲು ಈ ಹಿಂದಿನಂತೆ ಸರಳ ಮತ್ತು ಸುಲಭವಾಗಿ ಸಿಗುವಂತಾಗುವ ನಿಮಯ ರಚಿಸಿ ಸಂಬಂಧಿಸಿದ ಸಹಕಾರಿ ಸಂಘಕ್ಕೆ ಹಾಗೂ ಕೆಡಿಸಿಸಿ ಬ್ಯಾಂಕಿಗೆ, ಸಹಕಾರಿ ಸಂಘ ನಿಬಂಧಕರಿಗೆ ನಿರ್ದೇಶನ ನೀಡಲು ಅವರು ವಿನಂತಿಸಿಕೊಂಡಿದ್ದಾರೆ. .