ಗೋಕರ್ಣ: ವಿಶ್ವಖ್ಯಾತಿ ಮಹಾಬಲೇಶ್ವರನ ಸನ್ನಿಧಿ ಗೋಕರ್ಣದಲ್ಲಿ ಪ್ರವಾಸಿಗರ ಪಾಡು ಹೇಳತೀರದಾಗಿದೆ.ಮಳೆಗಾಲದ ಸಮಯದಲ್ಲಿ ಗೋಕರ್ಣ ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಸೋರುತ್ತದೆ. ಪ್ರಯಾಣಿಕರು ಕುಳಿತುಕೊಳ್ಳುವ ಆಸನದ ಮೇಲೆಯೇ ನೀರು ಸುರಿಯುತ್ತಿದ್ದು,ಛತ್ರಿ ಹಿಡಿದು ನಿಲ್ಲುವ ದೃಶ್ಯ ಸಾಮಾನ್ಯವಾಗಿದೆ. ಇನ್ನೂ ಎಲ್ಲೆಡೆ ಜಲಾವೃತಗೊಂಡಿದ್ದು, ಕಾಲಿಟ್ಟರೆ ಜಾರಿ ಬೀಳುವ ಸ್ಥಿತಿಯಿದೆ. ನಿತ್ಯ ನೂರಾರು ಸ್ಥಳೀಯ ಪ್ರಯಾಣಿಕರು, ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ. ಮೂರು ದಶಕಗಳ ಹಿಂದೆ ಇಲ್ಲಿನ ನಿವಾಸಿಗಳು ಬಸ್, ಡೀಪೋ ಜೊತೆ ಈ ಭಾಗಕ್ಕೆ ಬಸ್ ಸೌಕರ್ಯ ಸಿಗಲಿ ಎಂಬ ಆಶಯದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಜಾಗವನ್ನು ನೀಡಿದ್ದರು, ಅದರಂತೆ ಜಿಲ್ಲೆಯಲ್ಲೇ ವಿಸ್ತಾರ ಜಾಗ ಹೊಂದಿದ ಬಸ್ ನಿಲ್ದಾಣ ಎಂಬ ಖ್ಯಾತಿ ಪಡೆದಿತ್ತು. ನಂತರ ನಿರ್ವಹಣೆ ಇಲ್ಲದೆ ಹಾಳು ಬಿದ್ದಿದ್ದು, ಈಗ ಛಾವಣಿಗಳು ಕುಸಿಯುವ ಹಂತಕ್ಕೆ ತಲುಪಿದೆ.
ಈ ಸ್ಥಿತಿಯಲ್ಲಿದ್ದು, ಎರಡು ವರ್ಷವಾದರೂ ಸಾರಿಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯ ವಿವಿಧೆಡೆ ಹೊಸ ಬಸ್ ನಿಲ್ದಾಣ ನಿರ್ಮಾಣವಾಗಿದ್ದು, ಆದರೆ ಪ್ರವಾಸಿ ತಾಣದಲ್ಲಿ ಮಾತ್ರ ಶಿತಿಥಿಲಗೊಂಡ ಕಟ್ಟಡವೇ ಇದ್ದುದು ಗೋಕರ್ಣದ ದೌರ್ಭಾಗ್ಯವಾಗಿದೆ.