ಹೊನ್ನಾವರ: ಬಡ ಕುಟುಂಬದ ಯುವಕ ಪರೇಶ ಮೇಸ್ತನನ್ನು ಕೊಲೆ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇದರ ಹಿಂದೆ ಬಿಜೆಪಿ ನಾಯಕರ ಬಹಳ ದೊಡ್ಡ ಷಡ್ಯಂತ್ರ ಅಡಗಿದೆ. ಮುಂಬರಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಈ ಪ್ರಕರಣವನ್ನು ತನಿಖೆಗೆ ಆದೇಶಿಸಿ, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸುತ್ತೇವೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ ಹೇಳಿದರು.
ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಪರೇಶ ಮೇಸ್ತ ಕೊಲೆಯಾದ ಬಳಿಕ ಸರ್ಕಾರ ಸಿಓಡಿ ತನಿಖೆಗೆ ಆದೇಶಿಸಿತ್ತು. ಬಿಜೆಪಿ ಮುಖಂಡರು ಸಿ.ಬಿ. ಐಗೆ ವಹಿಸಬೇಕು ಎಂದು ಪಟ್ಟು ಹಿಡಿದರು.ನಂತರ ಸಿದ್ದರಾಮಯ್ಯಸಿ.ಬಿ.ಐ. ತನಿಖೆಗೆ ಆದೇಶ ನೀಡಿದ್ದರು. ಈಗ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬಂದಿದೆ. ಯಾಕೆ ಇನ್ನೂ ತನಿಖೆ ಪೂರ್ಣಗೊಂಡು, ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ. ಹಿರಿಯ ಪೊಲೀಸ್ ಅಧಿಕಾರಿಯ ಕಾರಿಗೆ ಬೆಂಕಿ ಹಾಕಿದ ಆರೋಪಿಗಳ ಮೇಲೆ ಇನ್ನೂ ಪ್ರಕರಣ ದಾಖಲಾಗಿಲ್ಲ. ಬಿಜೆಪಿ ನಾಯಕರ ಕುಮ್ಮಕ್ಕಿನಿಂದ ಗಲಭೆ ಸೃಷ್ಟಿಯಾಗಲು ಕಾರಣವಾಗಿದೆ ಎಂದು ಆರೋಪಿಸಿದರು.
ಬಿಜೆಪಿಯು ಧರ್ಮಗಳ ನಡುವೆ ಬೆಂಕಿ ಹಚ್ಚಲು ಯಾತ್ರೆ ಸಮಾವೇಶಗಳನ್ನು ಏರ್ಪಡಿಸುತ್ತಿದ್ದು, ದೇಶವನ್ನು ಕಾಪಾಡಲು ಸಾಧ್ಯವಾಗದಿದ್ದವರು ಧರ್ಮವನ್ನು ಹೇಗೆ ಕಾಪಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ಸರ್ಕಾರದ ಎಲ್ಲ ಕಾರ್ಯಗಳು ಕುಮಾರ ಕೃಪಾದಲ್ಲಿ ಆರ್.ಎಸ್.ಎಸ್ ಮುಖಂಡರ ಸಮ್ಮುಖದಲ್ಲಿ ತೀರ್ಮಾನವಾಗುತ್ತಿರುವುದು ಬಹಳ ನಾಚಿಕೆಯ ಸಂಗತಿ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿವಿಧ 27 ಪ್ರಕರಣಗಳನ್ನು ಎದುರಿಸುತ್ತಿದ್ದರು. ಅವರನ್ನು ಮುಖ್ಯಮಂತ್ರಿ ಮಾಡಿ ಪ್ರಕರಣಗಳನ್ನು ಹಿಂತೆಗೆದುಕೊಂಡಿದ್ದಾರೆ ಎಂದರು.