ಕಾರವಾರ: ಕೆಎಲ್ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ವಿದ್ಯಾರ್ಥಿ ಸಂಘ, ಎನ್.ಎಸ್.ಎಸ್. ಘಟಕವನ್ನು ಧಾರವಾಡ ವಿವಿಬಿ.ಇಡಿ, ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಎಸ್.ಎಸ್. ಸಮ್ಮಸಗಿ ಉದ್ಘಾಟಿಸಿದರು.ನಂತರ ರ‍್ಯಾಂಕ್ ವಿಜೇತರನ್ನು ಸನ್ಮಾನಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಶಿಕ್ಷಕರ ಹಿಂದೆ ಸತ್ಯ, ನಿತ್ಯ, ನಿರಂತರವಾಗಿ ಪ್ರಯತ್ನ ಮಾಡುತ್ತಾ ಸಾಗಿದರೆ ತಮ್ಮ ಸರ್ವತೋಮುಖ ವ್ಯಕ್ತಿತ್ವ ವಿಕಾಸ ಮಾಡಿಕೊಳ್ಳಬಹುದು. ಹಾಗಾಗಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ಅಮೂಲ್ಯ ಜೀವನವನ್ನು ಯಶಸ್ಸಿನ ದಾರಿಯಲ್ಲಿ ತೆಗೆದುಕೊಂಡು ಹೋಗುವ ಜತೆಯಲ್ಲಿ ಶಿಕ್ಷಕರ ವೃತ್ತಿಗೆ ಇರುವ ಗೌರವ ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಕೆ.ಎಲ್.ಇ. ಸಂಸ್ಥೆಯ ಸಂಯೋಜಕ ಆರ್.ನಟರಾಜ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸಾಧನೆಗಳ ಮೂಲಕ ಪಾಲಕರು ಮತ್ತು ಶಿಕ್ಷಕರಲ್ಲಿ ಖುಷಿ ತರುವಂತ ಕೆಲಸ ಆಗಬೇಕು ಎಂದರು.ವೇದಿಕೆಯಲ್ಲಿ ಡಾ. ಮಿಲನ್ ನಾರ್ವೇಕರ ಉಪಸ್ಥಿತರಿದ್ದರು. ರಶ್ಮಿಕಾ ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯ ಡಾ. ವಿನಾಯಕ ಜಿ ಹೆಗಡೆ ಸ್ವಾಗತಿಸಿದರು. ಉಪನ್ಯಾಸಕರಾದ ಮಂಜುನಾಥ ಇಟಗಿ, ಪ್ರವೀಣ ನಾಯ್ಕ, ಡಾ.ಪುಷ್ಪಾ ನಾಯ್ಕ, ಶೃದ್ಧಾನಾಯಕ, ಪೂಜಾ ಗೌಡ ನಿರ್ವಹಿಸಿದರು.
ಸನ್ಮಾನ: ಕರ್ನಾಟಕ ವಿಶ್ವವಿದ್ಯಾಲಯಕ್ಕೆ ರ‍್ಯಾಂಕ್ ಪಡೆದ ತಿಲಕ ನಾಯ್ಕ, ದೀಪಾ ನಾಯ್ಕ, ತೃಪ್ತಿ ಜಿ., ಪೂರ್ವ ಹಳೇಕರ, ಕಾಂಚನಾ ಗುನಗಾ, ಮೇಘನಾ ಮಡಿವಾಳ ಇವರನ್ನು ಸನ್ಮಾನಿಸಲಾಯಿತು.