
ಕುಮಟಾ: ಶಿರಸಿ-ಕುಮಟಾ ರಾಜ್ಯ ಹೆದ್ದಾರಿಯ ಕತಗಾಲ ಸಮೀಪ ರಸ್ತೆಯಲ್ಲಿ ನೀರು ತುಂಬಿರುವ ಪರಿಣಾಮ ಸಂಚಾರ ವ್ಯತ್ಯಯ ಉಂಟಾಗಿದೆ.
ಕಳೆದೆರಡು ದಿನದಿಂದ ಸುರಿದ ಭಾರೀ ಮಳೆಯ ಕಾರಣಕ್ಕೆ ಕತಗಾಲ ಸಮೀಪ ಎಂದಿನಂತೆ ರಸ್ತೆಯಲ್ಲಿ ನೀರು ನಿಂತಿದೆ. ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದಲೇ ವಾಹನ ಸವಾರರು ಕಾದು ನಿಂತಿದ್ದು, ಸುಮಾರು ಎರಡರಿಂದ ಮೂರು ಕಿ.ಮೀಗಳಷ್ಟು ದೂರ ವಾಹನ ಸಾಲುಗಟ್ಟಿ ನಿಂತಿದೆ.
ಶುಕ್ರವಾರ ಸಂಜೆ 5.30 ರ ವೇಳೆಗೆ ಭಟ್ಕಳ ಬಸ್ ಡ್ರೈವರ್ ಸಾಹಸ ತೋರಿ ನೀರಿನಲ್ಲೇ ವಾಹನ ಚಾಲನೆ ಮಾಡಿದ್ದು, ಯಾವುದೇ ತೊಂದರೆಯಾಗದೇ ಮತ್ತೊಂದು ಭಾಗವನ್ನು ತಲುಪಿದ್ದಾನೆ. ನಂತರ ಸಾಲಾಗಿ ಒಂದೊಂದು ಬಸ್ ಚಲಾಯಿಸಲು ಆರಂಭ ಮಾಡಿದ್ದು, ಕಾರು, ಬೈಕ್ ಸೇರಿದಂತೆ ಇನ್ನಿತರ ಲಘು ವಾಹನಗಳಿಗೆ ಸಂಚಾರಕ್ಕೆ ಅಡ್ಡಿಯಾಗಿದೆ.
ಮಳೆ ಕಡಿಮೆಯಾದಲ್ಲಿ ಮಾತ್ರ ನೀರು ಹರಿದು ಹೋದ ಬಳಿಕ ವಾಹನ ಸಂಚಾರ ಆರಂಭವಾಗುವ ಲಕ್ಷಣ ಕಂಡುಬಂದಿದೆ.