
ಶಿರಸಿ: ರಾಮಾಯಣದ ಪ್ರಕಾರ ಮಾರುತಿಯೆಂದರೆ ಭಕ್ತಿ, ಶಕ್ತಿ, ಯುಕ್ತಿಯ ಪ್ರತೀಕವಾಗಿದೆ. ಭಾರತದ ಪ್ರತಿರೂಪವನ್ನು ಮಾರುತಿಯಲ್ಲಿ ಕಾಣಬಹುದಾಗಿದೆ. ಭಕ್ತಿ, ಶಕ್ತಿ, ಯುಕ್ತಿಯ ಕಾರಣಕ್ಕೆ ಭಾರತೀಯರು ಗುರುತಿಸಿಕೊಂಡಿದ್ದಾರೆ ಎಂದು ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ ಹೇಳಿದರು.
ಅವರು ಭಾನುವಾರ ತಾಲೂಕಿನ ಕೊಳಗಿಬೀಸ್ ಶ್ರೀ ಮಾರುತಿ ದೇವಾಲಯದಲ್ಲಿ ಭಾನುವಾರ ನಡೆದ ಮಹಾದ್ವಾರ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ಜೀವಜಲ ಕಾರ್ಯಪಡೆಯ ಸಾಮಾಜಿಕ ಕಾರ್ಯದ ಮೂಲಕ ಶ್ರೀನಿವಾಸ ಹೆಬ್ಬಾರರು ರಾಜ್ಯದೆಲ್ಲೆಡೆ ಚಿರಪರಿಚಿತರು. ಒಳ್ಳೆಯ ಕೆಲಸಕ್ಕೆ ಅವರ ಕೊಡುಗೆ ಇನ್ನಷ್ಟು ಹೆಚ್ಚಲಿ ಎಂದರು.
ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಸ್ಪೀಕರ್ ಕಾಗೇರಿ ಮಾದರಿಯಾಗಿದ್ದಾರೆ. ಜೊತೆಗೆ ಕರ್ನಾಟಕ ವಿಧಾನಸಭೆಯನ್ನೂ ಸಹ ದೇಶದಲ್ಲಿಯೇ ಮಾದರಿ ವಿಧಾನಸಭೆಯನ್ನಾಗಿ ಮಾಡಿದ್ದಾರೆ. ಜಿಲ್ಲೆಯ ರಾಜಕೀಯ ನೇತಾರ ರಾಮಕೃಷ್ಣ ಹೆಗಡೆಯವರ ಬಳಿ ಪಳಗಿದ ದೇಶಪಾಂಡೆಯಂತಹ ರಾಜಕಾರಣಿಗಳನ್ನು ಪಡೆದಿರುವುದೇ ಜಿಲ್ಲೆಗೆ ಹೆಮ್ಮೆ ಎಂದರು.
ಉತ್ತರ ಕನ್ನಡ ಪರಿಸರ ಕೈಗಾರಿಕೆ ಅಭಿವೃದ್ಧಿಯಲ್ಲಿ ದೂರವಿದೆ. ಹಾಗಾಗಿ ನಮ್ಮ ಪರಿಸರ, ಶ್ರದ್ಧಾಕೇಂದ್ರಗಳನ್ನು ಜೊತೆಯಲ್ಲಿಟ್ಟುಕೊಂಡು ವಿಕಾಸದತ್ತ ಹೆಜ್ಜೆಯನ್ನಿಡಬೇಕಿದೆ ಎಂದರು.
ಶ್ರೀಮಾರುತಿ ದೇವಾಲಯದ ಮಹಾದ್ವಾರವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಕೇಂದ್ರಬಿಂದು ಶ್ರೀನಿವಾಸ ಹೆಬ್ಬಾರ್ರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವಿಸ್ತಾರ ಮೀಡಿಯಾ ಪ್ರೈ.ಲಿ. ಎಂ.ಡಿ ಏಚ್.ವಿ.ಧರ್ಮೇಶ್, ಶ್ರೀ ಮಾರುತಿ ದೇವಾಲಯದ ಅಧ್ಯಕ್ಷ ಶ್ರೀಧರ ಹೆಗಡೆ ಇಳ್ಳುಮನೆ ಇದ್ದರು. ಗಿರಿಧರ ಕಬ್ನಳ್ಳಿ ನಿರ್ವಹಿಸಿ ವಂದಿಸಿದರು.