ಹಳಿಯಾಳ ;ದಾಂಡೇಲಿಯ ಟೌನ್ ಶಿಪ್ ನಲ್ಲಿರುವ ಕೋಮಾರಪಂಥ ಸಮಾಜದ ಸಭಾಭವನದಲ್ಲಿ ನೂತನವಾಗಿ ಆರಂಭಿಸಲಾದ ಕಾಂಗ್ರೆಸ್ ಕಾರ್ಯಾಲಯವನ್ನು ಶಾಸಕ ಆರ್.ವಿ. ದೇಶಪಾಂಡೆ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ರಾಜಕಾರಣಿಯಾದವ ಕೇವಲ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬಾರದು. ರಾಜಕೀಯ ಅಂದರೇನೇ ಸೇವಾ ಕ್ಷೇತ್ರ ಇದ್ದ ಹಾಗೆ. ಜನೋಪಕಾರಿ ಕಾರ್ಯ ಮಾಡುವ ಮೂಲಕ ಜನ ನಿಮಗೆ ಅಧಿಕಾರ ನೀಡುವಂತಹ ಕೆಲಸ ಮಾಡಬೇಕು. ಪ್ರತಿಯೊಬ್ಬ ರಾಜಕಾರಣಿಗೂ ಮತ ಯಾಚಿಸುವ ಮುನ್ನ ನೈತಿಕ ಜವಾಬ್ದಾರಿ ಇರಬೇಕು ಎಂದರು.
ಕಾಂಗ್ರೆಸ್ ಪಕ್ಷ ಇದು ತನ್ನದೇ ಆದ ಇತಿಹಾಸವನ್ನು ಹೊಂದಿರುವಂತಹ ಪಕ್ಷ. ಇದರ ಕಾರ್ಯಕರ್ತನಾಗಿ ಕೆಲಸ ಮಾಡುವುದೇ ಒಂದು ಹೆಮ್ಮೆ ಎಂದರು. ಕಾಂಗ್ರೆಸ್ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಜನ ಈಗಲೂ ಅವುಗಳನ್ನು ನೆನೆಸುತ್ತಾರೆ. ಆದರೆ ಈಗ ಭಾ.ಜ.ಪ.ನೇತೃತ್ವದ ಸರಕಾರದಿಂದ ಜನರ ಬದುಕು ಕಂಗಾಲಾಗಿದೆ. ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. 2 ಕೋಟಿ ಉದ್ಯೋಗ ಕೊಡುತ್ತೇನೆಂದಿದ್ದ ಪ್ರಧಾನ ಮಂತ್ರಿಗಳು ಇದ್ದ ಉದ್ಯೋಗಗಳಿಗೇ ಕತ್ತರಿ ಹಾಕುತ್ತಿದ್ದಾರೆ. ಪ್ರೌಢ ಶಾಲೆಗೆ ನೀಡುತ್ತಿದ್ದ ಸೈಕಲ್‌ಗಳನ್ನು ಬಂದ್ ಮಾಡಿದ್ದಾರೆ ಎಂದು ಬೇಸರಿಸಿದರು. ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಸರಸ್ವತಿ ರಜಪೂತ ಉಪಾಧ್ಯಕ್ಷ ಸಂಜಯ ನಂದ್ಯಾಳಕರ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿ.ಆರ್. ಹೆಗಡೆ, ಕಾರ್ಯದರ್ಶಿ ಎಸ್.ಎಸ್. ಪೂಜಾರ್, ಜೋಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬಗಾರ, ಪ್ರಮುಖರಾದ ಮುನ್ನಾ ವಹಾಬ್ ಇಕಾಲ ಶೇಖ್, ಅಪ್ಪನಗೌಡರ್, ಹಾಗೂ ನಗರಸಭಾ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವೊ. ಆರ್. ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ಎಸ್.ಎಸ್. ಪೂಜಾರ ನಿರೂಪಿಸಿ, ವಂದಿಸಿದರು.