
ಕುಮಟಾ: ತಾಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಅಘನಾಶಿನಿ ನದಿಯು ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯಲಾರಂಭಿಸಿದೆ. ನದಿ ಪಾತ್ರದ ತಗ್ಗು ಪ್ರದೇಶದಲ್ಲಿರುವ ಹಲವು ಗ್ರಾಮಗಳು ಜಲಾವೃತಗೊಂಡಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಕಳೆದ ಕೆಲವು ದಿನಗಳಿಂದ ಸುರಿಯಲಾಂಭಿಸಿದ್ದ ಮಳೆಯು ಗುರುವಾರದಿಂದ ತನ್ನ ತೀವ್ರತೆಯನ್ನು ಹೆಚ್ಚಿಸಿದೆ. ಇಲ್ಲಿನ ಜೀವನದಿ ಅಘನಾಶಿನಿಯು ತನ್ನ ಮಟ್ಟವನ್ನು ಮೀರಿ ಹರಿಯಲಾರಂಭಿಸಿದೆ. ಪರಿಣಾಮ ನದಿಯಂಚಿನ ಹಲವು ಗ್ರಾಮಗಳಿಗೆ ನೀರು ನುಗ್ಗಿವೆ. ಹಲವಾರು ಜನವಸತಿ ಪ್ರದೇಶ, ಮನೆ, ಕೃಷಿ ಭೂಮಿ ಸೇರಿದಂತೆ ಇನ್ನಿತರ ಪ್ರದೇಶಗಳು ಪ್ರವಾಹದಿಂದ ಸಂಪೂರ್ಣ ಜಲಾವೃತಗೊಂಡಿವೆ. ವರುಣನ ಆರ್ಭಟಕ್ಕೆ ಅನೇಕ ಆಸ್ತಿಪಾಸ್ತಿಗಳು ಹಾನಿಯಾಗಿದೆ. ನದಿ ಪಾತ್ರದ ಜನತೆ ಆತಂಕದ ನಡುವೆ ದಿನಕಳೆಯುವಂತಾಗಿದೆ.
ತಾಲೂಕಿನಲ್ಲಿ 18 ಕಾಳಜಿ ಕೇಂದ್ರ ಪ್ರಾರಂಭ:
ಜಲಾವೃತಗೊಂಡ ಪ್ರದೇಶಗಳ ಜನರ ಸುರಕ್ಷತೆಗಾಗಿ ತಾಲೂಕಿನ ದೀವಗಿ, ಗಂಗಾವಳಿ, ಗಂಗಾವಳಿ 2, ಗಂಗೆಕೊಳ್ಳ, ಕಲ್ಲಬ್ಬೆ, ಕಲ್ಲಬ್ಬೆ 2, ಬೋಗ್ರೀಬೈಲ, ಕರ್ಕಿಮಕ್ಕಿ, ಮೂರೂರು, ತಂಡ್ರಕುಳಿ, ಮಣಕೋಣ, ಉಪ್ಪಿನಪಟ್ಟಣ, ಅಳಕೋಡ, ಮಿರ್ಜಾನ, ಕವಲಡಿ, ಕವಲಡಿ 2, ಸೊಪ್ಪಿನಹೊಸಳ್ಳಿ ಹಾಗೂ ಖೈರೆಯಲ್ಲಿ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಜಲಾವೃತ ಗೊಂಡ ಪ್ರದೇಶದ ಜನರನ್ನು ಸುರಕ್ಷಿತವಾಗಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಜಲಾವೃತಗೊಂಡು ಮನೆಗಳಿಗೆ ಹಾನಿ:
ಸುರಿದ ಮಳೆಯಿಂದ ತಾಲೂಕಿನ ಹೆಗಡೆ, ಬಂಗಣೆ, ನಾಡುಮಾಸ್ಕೇರಿ ಹಾಗೂ ಸಂತೆಗುಳಿ ಭಾಗದಲ್ಲಿ 15 ಕ್ಕೂ ಅಧಿಕ ಮನೆಗಳಿಗೆ ತೀವ್ರ ಹಾನಿ ಸಂಭವಿಸಿದ್ದು, 35 ಕ್ಕೂ ಅಧಿಕ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಕಂದಾಯ ಇಲಾಖೆ ಸಮೀಕ್ಷೆ ಕಾರ್ಯ ಪ್ರಾರಂಭಿಸಿದೆ.
ಹಸುಗಳು ನೀರು ಪಾಲು:
ಹೆಗಡೆಯ ಪುರಂದರ ಪರಮೇಶ್ವರ ನಾಯ್ಕ ಅವರಿಗೆ ಸಂಬಂಧಪಟ್ಟ ಎರಡು ಹಸುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ದೋಣಿಯ ಮೂಲಕ ಕೊಂಡೊಯ್ಯುವಾಗ ಏಕಾಏಕಿ ದೋಣಿ ಮಗುಚಿದ ಪರಿಣಾಮ ಎರಡೂ ಹಸುಗಳು ನೀರು ಪಾಲಾಗಿವೆ.
ಕುಮಟಾ-ಶಿರಸಿ ರಸ್ತೆ ಬಂದ್:
ಘಟ್ಟದ ಮೇಲ್ಭಾಗದಲ್ಲಿ ಸುರಿದ ಮಳೆಯಿಂದಾಗಿ ಇಲ್ಲಿನ ಚಂಡಿಕಾ ನದಿಯು ಉಕ್ಕಿ ಹರಿದ ಪರಿಣಾಮ ಕತಗಾಲ ರಸ್ತೆಯು ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸ್ಥಳೀಯರು, ವಿಪತ್ತು ನಿರ್ವಹಣಾ ಸದಸ್ಯರು, ಪೊಲೀಸ್, ಅಗ್ನಿಶಾಮಕ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ದೋಣಿಯ ಮೂಲಕ ಜನರನ್ನು ಸ್ಥಳಾಂತರಿಸಿದರು.
ಅತೀಹೆಚ್ಚು ಜಲಾವೃತಗೊಂಡ ಜನವಸತಿ ಪ್ರದೇಶಗಳು:
ದೀವಗಿ, ಮಿರ್ಜಾನ, ಸಂತೇಗುಳಿ, ಹೆಗಡೆ, ಕತಗಾಲ, ಬೋಗ್ರೀಬೈಲ, ಕರ್ಕಿಮಕ್ಕಿ, ಮೂರೂರು, ತಂಡ್ರಕುಳಿ, ಮಣಕೋಣ, ಉಪ್ಪಿನಪಟ್ಟಣ, ಸೊಪ್ಪಿನಹೊಸಳ್ಳಿ, ಖೈರೆ ಸೇರಿದಂತೆ ಹಲವು ಗ್ರಾಮಗಳು ಭಾಗಶಃ ಜಲಾವೃತಗೊಂಡಿವೆ.
ಒಟ್ಟಾರೆ ವರುಣನ ಆರ್ಭಟಕ್ಕೆ ತಾಲೂಕು ನಲುಗಿದ್ದು, ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನದಿ ಪಾತ್ರದ ಜನತೆ ಮುನ್ನೆಚ್ಚರಿಕೆ ವಹಿಸುವಂತೆ ತಾಲೂಕಾಡಳಿತ ತಿಳಿಸಿದೆ.