ಶಿರಸಿ: ವೈದಿಕರಿಂದ ವೇದ ಘೋಷ, ಭಕ್ತರ ಭಕ್ತಿಯ ಪರಾಕಾಷ್ಟೆಯೊಂದಿಗೆ ತಾಲೂಕಿನ ಕೊಳಗಿಬೀಸ್ ಮಾರುತಿ ದೇವಾಲಯದಲ್ಲಿ ಹಮ್ಮಿಕೊಳ್ಳಲಾದ ಮಹಾರುದ್ರಯಾಗ ಶನಿವಾರ ಸಂಪನ್ನಗೊಂಡಿತು. ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹಾಗೂ ಕುಟುಂಬ ಲೋಕ ಕಲ್ಯಾಣಾರ್ಥವಾಗಿ ಈ ಮಹಾಯಾಗ ಹಮ್ಮಿಕೊಂಡಿದ್ದರು.
ಶನಿವಾರ ಬೆಳಗ್ಗೆ 11 ಯಜ್ಞ ಕುಂಡಗಳ ಮೂಲಕ ಈ ಯಾಗ ನಡೆಸಲಾಯಿತು. ವಿ. ಕುಮಾರ ಭಟ್ ಕೊಳಗಿಬೀಸ್ ಅವರ ಪ್ರಧಾನ ಆಚಾರ್ಯತ್ವದಲ್ಲಿ ನಡೆದ ಈ ಮಹಾಯಾಗದಲ್ಲಿ ವಿ. ವಿನಾಯಕ ಭಟ್ ಹೊಸಳ್ಳಿ, ಆದರ್ಶ ಭಟ್, ಸುಬ್ರಾಯ ಭಟ್, ಶ್ರೀನಾಥ ಭಟ್ ಮತ್ತಿಘಟ್ಟ, ಸುರೇಶ ಭಟ್ ಕಂಚಿಕೊಪ್ಪ, ಮಹಾಬಲೇಶ್ವರ ಭಟ್ ಗೋಳಿ, ರಾಜಾರಾಮ ಭಟ್ ಹೆಗ್ಗರ್ಸಿಮನೆ ಸೇರಿದಂತೆ 151ವೈದಿಕರು ಪಾಲ್ಗೊಂಡಿದ್ದರು.
ಕೊರೋನಾ ನಿವಾರಣೆಗೆ ಶಾಂತಿ: ಜಗತ್ತನ್ನು ಕಾಡಿರುವ ಕೊವಿಡ್ 19 ಸಂಪೂರ್ಣ ನಿವಾರಣೆ ಆಗುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಈ ಕುರಿತಂತೆ ದುರ್ಗಾ ಶಾಂತಿ ನಡೆಸಲಾಯಿತು. 11 ಯಜ್ಞ ಕುಂಡದಲ್ಲಿ ಏಕಕಾಲಕ್ಕೆ ಪೂರ್ಣಾಹುತಿ ನಡೆಯಿತು. ಯಜ್ಞದ ಯಜಮಾನತ್ವವನ್ನು ಶಿರಸಿ ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಪತ್ನಿ ಹೇಮಾ, ಕುಟುಂಬದ ಸದಸ್ಯರಾದ ನಿವೇದಿತಾ ಹಾಗೂ ಅಕ್ಷತ್ ಹೆಗಡೆ ಇತರರಿದ್ದರು.

ದೇವಾಲಯದ ಅಧ್ಯಕ್ಷ ಶ್ರೀಧರ ಹೆಗಡೆ ಇಳ್ಳುಮನೆ ದಂಪತಿ, ಶ್ರೀಧರ ಭಟ್ ಕೊಳಗಿಬೀಸ್ ದಂಪತಿ, ಮತ್ತಿಗಾರ ನೇರ್ಲವಳ್ಳಿ ಹಾಗೂ ಕೊಳಗಬೀಸ್ ಸುತ್ತಮುತ್ತಲಿನ ಗ್ರಾಮಗಳ ಜನತೆ ಮಹಾರುದ್ರಯಾಗದಲ್ಲಿ ಪಾಲ್ಗೊಂಡಿದ್ದರು.
ಮಹಾದ್ವಾರ ಉದ್ಘಾಟನೆ: ಶ್ರೀನಿವಾಸ ಹೆಬ್ಬಾರ್ ಮತ್ತು ಕುಟುಂಬ ದೇವಾಲಯದ ಎದುರಿನಲ್ಲಿ ನೂತನವಾಗಿ ನಿರ್ಮಿಸಿರುವ ಮಹಾದ್ವಾರವನ್ನು ಮೇ 22 ರಂದು ಸಂಜೆ 5ಗಂಟೆಗೆ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀನಿವಾಸ ಹೆಬ್ಬಾರ್ ವಹಿಸಲಿದ್ದು, ಶಾಸಕ ಆರ್ ವಿ ದೇಶಪಂಡೆ, ಮೆಗಾ ಲೈಟ್ ಇಂಡಸ್ಟ್ರೀಸ್ ನ ಎಚ್ ವಿ ಧರ್ಮೇಶ, ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಇತರರು ಪಾಲ್ಗೊಳ್ಳಲಿದ್ದಾರೆ. ಮಳೆಯ ವಾತಾವರಣ ಇರುವುದರಿಂದ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಶನಿವಾರ ಬೇರೆಡೆ ಮಳೆಯಾಗಿದ್ದರೂ ಕೊಳಗಿಬೀಸ್ ಸುತ್ತಮುತ್ತ ಮಳೆ ಆಗಿಲ್ಲ. ಇದು ಕಾರ್ಯಕ್ರಮಕ್ಕೆ ಬಂದ ಭಕ್ತರಿಗೆ ಅನುವಾಗಿದ್ದು, ಮಾರುತಿಯ ಆಶೀರ್ವಾದ ಸಿಕ್ಕಂತಾಗಿದೆ. – ಶ್ರೀನಿವಾಸ ಹೆಬ್ಬಾರ್