• Slide
    Slide
    Slide
    previous arrow
    next arrow
  • ಗ್ರಾಮೀಣ ಪ್ರತಿಭೆಯ ಐಎಎಸ್ ಕನಸನ್ನು ಪೋಷಿಸುವ ಹೊಣೆ ಹೊತ್ತ ‘ಆಧಾರ ಸಂಸ್ಥೆ’

    300x250 AD

    ಸಿದ್ದಾಪುರ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಓದಿ 625ಕ್ಕೆ 624 ಅಂಕವನ್ನು ಪಡೆದು ಶೇ 99.84ರಷ್ಟು ಪ್ರತಿಶತದೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದ ಮೀನಾಕ್ಷಿ ಗೌಡ ಅಪ್ಪಟ ಗ್ರಾಮೀಣ ಪ್ರತಿಭೆ. ಈಕೆಯು ಸ್ವಪ್ರಯತ್ನದಿಂದ ಈ ಸಾಧನೆಯನ್ನು ಮಾಡಿದವಳು. ಮುಂದೆಯು ಇನ್ನು ಹೆಚ್ಚಿನ ಸಾಧನೆಯನ್ನು ಮಾಡಬೇಕಾಗಿದೆ. ಅವಳ ಮುಂದಿನ ಶೈಕ್ಷಣಿಕ ಸಾಧನೆಗೆ ಆರ್ಥಿಕ ತೊಂದರೆ ಕಾರಣ ಆಗಬಾರದು. ಆ ಕಾರಣಕ್ಕೆ ನಮ್ಮ ಆಧಾರ ಸಂಸ್ಥೆಯು ಅವಳ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಭರಿಸಲಿದೆ ಎಂದು ಆಧಾರ ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ತಿಳಿಸಿದರು.

    ಅವರು ತಾಲೂಕಿನ ಸಂಪಗೋಡ ಗ್ರಾಮದ ಹೊನ್ನಕುಳಿಯ ಮೀನಾಕ್ಷಿ ಗೌಡ ಅವರ ನಿವಾಸದಲ್ಲಿ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದರು. ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ತೀರಾ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯ ಈ ಸಾಧನೆ ನಿಜಕ್ಕೂ ಇತರರಿಗೆ ಮಾದರಿಯಾಗಿದೆ. ಯಾವುದೇ ಶೈಕ್ಷಣಿಕ ಹಿನ್ನಲೆ ಇಲ್ಲದ ಹಿಂದುಳಿದ ವರ್ಗದ ಇವಳ ಈವರೆಗಿನ ಸಾಧನೆಗೆ ನಾವುಗಳು ಯಾರು ಕಾರಣರಾಗಿಲ್ಲ. ಮುಂದೆ ಹೆಚ್ಚಿಗೆ ಓದಿ ಐಎಎಸ್ ಮಾಡಬೇಕು ಎನ್ನುವ ಕನಸನ್ನು ಕಾಣುತ್ತಿರುವ ಆಕೆಗೆ ಸಮುದಾಯದ ಸಹಕಾರ ಅಗತ್ಯವಾಗಿದೆ. ಈ ಕಾರಣಕ್ಕೆ ನಮಗಿರುವ ಸಂಪರ್ಕ ಮತ್ತು ಸಂಬಂಧವನ್ನು ಬಳಸಿಕೊಂಡು ಅವಳ ಮುಂದಿನ ಶೈಕ್ಷಣಿಕ ಚಟುವಟಿಕೆಗಳಿಗೆ ನೆರವಾಗುತ್ತೇವೆ. ಅವಳ ಕನಸಿಗೆ ನೀರೆರೆದು ಬೆಳೆಸುವ ಕೆಲಸವನ್ನು ಸಂಸ್ಥೆ ಮಾಡಲಿದೆ ಎಂದರು.

    ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಮಾತನಾಡಿ, ಈ ಸಾಧನೆ ಇತರ ಎಲ್ಲಾ ವಿದ್ಯಾರ್ಥಿಗಳಿಗೂ ಒಂದು ದೊಡ್ಡ ಮಾದರಿಯಾಗಿದೆ. ಸರಕಾರಿ ಶಾಲೆಯಲ್ಲಿಯೂ ಓದಿ ಉತ್ತಮ ಸಾಧನೆಯನ್ನು ಮಾಡಲು ಸಾಧ್ಯ ಎನ್ನುವುದನ್ನು ಈಕೆ ಮಾಡಿ ತೋರಿಸಿದ್ದಾಳೆ. ಮನೆಯಲ್ಲಿ ಸರಿಯಾಗಿ ಓದಲು ಎಲ್ಲಾ ಸಮಯದಲ್ಲಿ ವಿದ್ಯುತ್ ವ್ಯವಸ್ಥೆ ಸರಿಯಾಗಿ ಇಲ್ಲ. ಎರಡು ಮೈಲಿನಷ್ಟು ನಡೆದು ಹೋಗಿ ಬಸ್ಸಿಗೆ ಓಡಾಡಬೇಕು. ಈ ನಡುವೆ ಇರುವ ಸಮಯದಲ್ಲಿ ಓದಿ ತನ್ನ ಪ್ರಯತ್ನದಿಂದ ಒಳ್ಳೆಯ ಸಾಧನೆಯನ್ನು ಮಾಡಿದ್ದಾಳೆ. ಇವಳ ಮುಂದಿನ ವಿದ್ಯಾಭ್ಯಾಸಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

    300x250 AD

    ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಮಹೇಶ ಹೆಗಡೆ, ಪತ್ರಕರ್ತ ದಿವಾಕರ ನಾಯ್ಕ ಸಂಪಖಂಡ,ಗುತ್ತಿಗೆದಾರ ಹೇಮಂತ ನಾಯ್ಕ ಕುಣಜಿ, ಪ್ರಶಾಂತ ಎಸ್.ನಾಯ್ಕ ಅವರಗುಪ್ಪ, ಮೀನಾಕ್ಷಿ ಗೌಡಳ ತಂದೆ ಮಂಜುನಾಥ ಗೌಡ, ತಾಯಿ ಗೋದಾವರಿ ಗೌಡ ಮೊದಲಾದವರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top