ದಾಂಡೇಲಿ: ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಗರದ ಜನತಾ ವಿದ್ಯಾಲಯ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಜ್ಯಕ್ಕೆ ಆರು ರ್ಯಾಂಕ್ಗಳನ್ನು ತಮ್ಮದಾಗಿಸಿಕೊಂಡು ಶಾಲೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಇದರಲ್ಲಿ ಮೂವರು ವಿದ್ಯಾರ್ಥಿಗಳು 625ಕ್ಕೆ 618 ಅಂಕಗಳನ್ನು ಪಡೆದುಕೊಂಡು ರಾಜ್ಯಕ್ಕೆ 8ನೇ ರ್ಯಾಂಕ್ ಸಂಪಾದಿಸಿದ್ದಾರೆ.
ಆಜಾದ ನಗರದ ನಿವಾಸಿ ಹಾಗೂ ಶಿಕ್ಷಕರಾದ ನಾಗಪ್ಪ ಅರವಳ್ಳಿ ಮತ್ತು ವಿರಮ್ಮ ಅರವಳ್ಳಿ ದಂಪತಿಗಳ ಸುಪುತ್ರಿ ಸುಷ್ಮಾ ಅರವಳ್ಳಿ ಅವರು ಶೇ 99.20 (625/620) ಅಂಕಗಳನ್ನು ಪಡೆದುಕೊಂಡು ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಶಾಲೆಯ ಮೂವರು ವಿದ್ಯಾರ್ಥಿಗಳಾದ ಟೌನ್ಶಿಪ್ ನಿವಾಸಿ ದೀಪಕ ಸಾಮಂತ ಮತ್ತು ದೀಪಾಲಿ ಸಾಮಂತ ದಂಪತಿಗಳ ಸುಪುತ್ರಿ ಹಾಗೂ ಬಾಲ ಕವಯತ್ರಿ ಸಾಕ್ಷಿ ಸಾಮಂತ, ವೆಸ್ಟ್ ಕೊಸ್ಟ್ ಪೇಪರ್ ಮಿಲ್ ನಿವಾಸಿಗಳಾದ ಸಂತೋಷ ದೇಸಾಯಿ ಮತ್ತು ಸುನಿತಾ ದೇಸಾಯಿ ದಂಪತಿಗಳ ಸುಪುತ್ರಿ ತನಿಷ್ಕಾ ದೇಸಾಯಿ ಹಾಗೂ ಟೌನ್ಶಿಪ್ ನಿವಾಸಿ ಸಾಯಿನಾಥ ರಾಣೆ ಮತ್ತು ಛಾಯಾ ರಾಣೆ ದಂಪತಿ ಸುಪುತ್ರ ನಿಖೀಲ ರಾಣೆ ತಲಾ 618 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.
14ನೇ ಬ್ಲಾಕ್ ನಿವಾಸಿ ಹಾಗೂ ಉಪನ್ಯಾಸಕ ದಂಪತಿಗಳಾದ ಬಸವರಾಜ ನಾಯಕ ಮತ್ತು ನಿರುಪಮಾ ನಾಯಕ ದಂಪತಿ ಸುಪುತ್ರ ಅಭಿಮಾನ ನಾಯಕ 617 ಅಂಕಗಳನ್ನು ಪಡೆದುಕೊಂಡು ರಾಜ್ಯಕ್ಕೆ 9ನೇ ರ್ಯಾಂಕ್ ಮತ್ತು ಟೌನ್ಶಿಪ್ ನಿವಾಸಿಗಳಾದ ವೆಂಕಟೇಶ ಕೆಳವೇಕರ ಮತ್ತು ಪ್ರಗತಿ ಕೆಳವೇಕರ ದಂಪತಿಗಳ ಸುಪುತ್ರ ಸಾಯಿಶ್ ಕೆಳವೇಕರ 616 ಅಂಕಗಳನ್ನು ಪಡೆದುಕೊಂಡು ರಾಜ್ಯಕ್ಕೆ 10ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಕೆನರಾ ವೆಲ್ಪೇರ್ ಟ್ರಸ್ಟಿನ ಅಧ್ಯಕ್ಷರಾದ ಎಸ್.ಪಿ.ಕಾಮತ್, ಆಡಳಿತಾಧಿಕಾರಿ ಕೆ.ವಿ.ಶೆಟ್ಟಿ, ಜನತಾ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ ಎಂ.ಎಸ್.ಇಟಗಿ, ಜನತಾ ವಿದ್ಯಾಲಯ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಕಿಶೋರ ಕಿಂದಳ್ಕರ್ ಹಾಗೂ ಪ್ರೌಢಶಾಲೆಯ ಶಿಕ್ಷಕ ವೃಂದ ಮತ್ತು ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.