ಶಿರಸಿ: ತಾಲೂಕಿನ ಕೊಳಗಿಬೀಸ್ ಶ್ರೀ ಮಾರುತಿ ದೇವಾಲಯ ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಶುಕ್ರವಾರ ತೆರೆದುಕೊಂಡಿದೆ. ಶಿರಸಿ ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಮತ್ತು ಕುಟುಂಬ ಸೇವಾರ್ಥವಾಗಿ ನಿರ್ಮಿಸಿರುವ ಪ್ರವೇಶ ದ್ವಾರ ಉದ್ಘಾಟನೆ ಹಾಗೂ ಮಹಾರುದ್ರ ಯಾಗದ ಧಾರ್ಮಿಕ ವಿಧಿ ವಿಧಾನಗಳು ಬೆಳಗ್ಗೆಯಿಂದ ಆರಂಭವಾಗಿತ್ತು.
ಮಾರುತಿ ದೇವಾಲಯದ ಆವರಣದಲ್ಲಿ ಬೆಳಗ್ಗೆ ವಿದ್ವಾನ್ ಕುಮಾರ ಭಟ್ ಕೊಳಗಿಬೀಸ್ ಅವರ ಪ್ರಧಾನ ಆಚಾರ್ಯತ್ವದಲ್ಲಿ ನಾಂದಿ ಪುಣ್ಯಾಹವಾಚನ ,ಉತ್ಸವ ಸಂಕಲ್ಪ ಕಾರ್ಯಕ್ರಮಗಳು ಆರಂಭಗೊಂಡವು. ಬಳಿಕ
ಶಾಂತಿ, ಹೋಮ, ಮಹಾ ಪೂಜೆ ಕಾರ್ಯಕ್ರಮಗಳನ್ನು ನಡೆಸಲಾಯಿತು.
೧೫ ವೈದಿಕರು ಪಾಲ್ಗೊಂಡ ಈ ಕಾರ್ಯಕ್ರಮದಲ್ಲಿ ಶ್ರೀನಿವಾಸ ಹೆಬ್ಬಾರ್ ಕುಟುಂಬ ನೇತೃತ್ವ ವಹಿಸಿ, ಪೂರ್ಣಾಹುತಿ ಸಲ್ಲಿಸಿದೆ. ಸಂಜೆ ವಾಸ್ತು ಹೋಮ, ರಾಕ್ಷೋಗ್ರ ಹೋಮಗಳು ನಡೆದವು.
ಮಾರುತಿ ದೇವಾಲಯದ ಆವರಣವನ್ನು ಪುಷ್ಪಗಳಿಂದ ಅಲಂಕರಿಸಲಾಗಿದ್ದು, ನೋಡುಗರ ಮನದಣಿಸುವಂತಿದೆ. ದೇವಾಲಯ ಮತ್ತು ಪ್ರವೇಶ ದ್ವಾರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದರೂ, ಮತ್ತಿಗಾರ, ನೇರ್ಲವಳ್ಳಿ, ಕೊಳಗಿಬೀಸ್ ಸೇರಿದಂತೆ ಸುತ್ತಲಿನ ಗ್ರಾಮಗಳ ಉತ್ಸಾಹ ಎಂದಿನಂತೆ ಇದೆ. ದೇವಾಲಯದ ಈ ಕಾರ್ಯಕ್ರಮದಲ್ಲಿ ಇಲ್ಲಿಯ ಜನತೆ ಜಾತಿ ಮತ ಬೇಧ ಮರೆತು ಭಾಗಿಯಾಗಿರುವುದು ವಿಶೇಷ. ದೇವಾಲಯದ ಆವರಣದಲ್ಲಿ ತಗಡಿನ ಶೀಟ್ ಅಳವಡಿಸಿ ಚಪ್ಪರ ಹಾಕಲಾಗಿದ್ದು, ಬರುವ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ.
ದೇವಾಲಯದ ಅಧ್ಯಕ್ಷ ಶ್ರೀಧರ ಹೆಗಡೆ ಇಳ್ಳುಮನೆ, ನರಸಿಂಹ ಹೆಗಡೆ ಹೆಬ್ಬಲಸು, ಉಮಾಪತಿ ಭಟ್ ಮತ್ತಿಗಾರ, ಶ್ರೀಧರ ಭಟ್ ಕೊಳಗಿಬೀಸ್ ಇತರರಿದ್ದರು.
ದೇವಾಲಯದಲ್ಲಿ ಇಂದು: ಮೇ.21 ರಂದು ಮಾರುತಿ ದೇವರ ಕಲಾವೃದ್ಧಿ , ಶತಾಧಿಕ ಋತ್ವಿಜರಿಂದ 11 ಕುಂಡಗಳಲ್ಲಿ ಮಹಾರುದ್ರ ಯಾಗ ನಡೆಯಲಿದೆ. ವಿ. ಕುಮಾರ ಭಟ್ ಕೊಳಗಿಬೀಸ್ ಪ್ರಧಾನ ಆಚಾರ್ಯತ್ವ ವಹಿಸಲಿರುವ ಈ ಕಾರ್ಯಕ್ರಮದಲ್ಲಿ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ನೇತೃತ್ವ ವಹಿಸಲಿದ್ದಾರೆ.
ಸುರಿಯುತ್ತಿರುವ ಮಳೆಯ ಕಾರಣದಿಂದ ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾತ್ರ ಮುಂದೂಡಲಾಗಿದೆ. ಮಹಾದ್ವಾರದ ಸಮರ್ಪಣೆ, ಧಾರ್ಮಿಕ ಹಾಗೂ ಸಭಾ ಕಾರ್ಯಕ್ರಮಗಳು ನಿಗದಿಯಂತೆ ನಡೆಯಲಿದೆ.
– ಶ್ರೀನಿವಾಸ ಹೆಬ್ಬಾರ್, ಅಧ್ಯಕ್ಷರು ಜೀವಜಲ ಕಾರ್ಯಪಡೆ, ಶಿರಸಿ