ಭಟ್ಕಳ: ತಾನು ದೇವರನ್ನು ಪ್ರೀತಿಸುತ್ತೇನೆ ಎಂದು ಹೇಳಿಕೊಳ್ಳುವ ವ್ಯಕ್ತಿ ಕೇವಲ ಒಂದು ವರ್ಗ ಅಥವಾ ಧರ್ಮದವರನ್ನು ಪ್ರೀತಿಸದೇ, ಇಡೀ ಮನುಷ್ಯ ವರ್ಗವನ್ನು ಪ್ರೀತಿಸುವವನಾಗಿರುತ್ತಾನೆ ಎಂದು ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಹಾಗೂ ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಂ ಹೇಳಿದರು.
ಅವರು ಜಮಾತೆ ಇಸ್ಲಾಮಿ ಹಿಂದ್ ಹಾಗೂ ಸದ್ಭಾವನಾ ಮಂಚ್ ವತಿಯಿಂದ ನಗರದ ಅನ್ಫಾಲ್ ಹೈಪರ್ ಮಾರ್ಕೆಟ್ ಬಳಿಯ ಆಮೀನಾ ಪ್ಯಾಲೇಸ್‍ನಲ್ಲಿ ಆಯೋಜಿಸಿದ್ದ ‘ಫ್ಯಾಮಿಲಿ ಗೆಟ್ ಟುಗೆದರ್ ಸೌಹಾರ್ದ ಸಂಜೆ-2022 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರವಾದಿ ಮುಹಮ್ಮದರು ಈ ಜಗತ್ತಿನ ಎಲ್ಲ ಮನುಷ್ಯರು ದೇವನ ಕುಟುಂಬದ ಸದಸ್ಯರು ಎಂದು ಕಲಿಸಿಕೊಟ್ಟಿದ್ದಾರೆ. ಎಲ್ಲ ಮನುಷ್ಯರಿಗೆ ಯಾರು ಹೆಚ್ಚು ಉಪಕಾರ ಮಾಡುತ್ತಾರೋ ಅವರನ್ನು ದೇವನು ಹೆಚ್ಚು ಇಷ್ಟಪಡುತ್ತಾನೆ ಎಂದು ಹೇಳುವುದರ ಮೂಲಕ ಪ್ರವಾದಿ ಮಹಮ್ಮದ್ ಮನುಷ್ಯತ್ವದ ಉದಾತ್ತ ಚಿಂತನೆಗಳನ್ನು ಈ ಜಗತ್ತಿಗೆ ಕಲಿಸಿಕೊಟ್ಟಿದ್ದಾರೆ ಎಂದರು. ಎಲ್ಲ ಹಬ್ಬಗಳು ಉದಾತ್ತವಾದ ಸಂದೇಶಗಳನ್ನು ನೀಡುತ್ತವೆ. ನಾವು ಪರಸ್ಪರರ ಹಬ್ಬಗಳ ಸಂದೇಶಗಳನ್ನು ಅರಿತುಕೊಳ್ಳಬೇಕು ಎಂದು ಕರೆ ನೀಡಿದರು.
ಕರಿಕಲ್ ಸೆಕ್ರಡ್ ಹಾರ್ಟ್ ಚರ್ಚ್‍ನ ಧರ್ಮಗುರು ಫಾ.ಲವಾರೆನ್ಸ್ ಫನಾರ್ಂಡಿಸ್ ಈದ್ ಸಂದೇಶವನ್ನು ನೀಡಿ, ಮನುಷ್ಯ ತನ್ನ ಮನುಷ್ಯತ್ವ ಗುಣಗಳನ್ನು ಮರೆತಾಗ ಮೃಗನಾಗುತ್ತಾನೆ. ಆದ್ದರಿಂದ ನಾವು ಮೊದಲು ಮನುಷ್ಯರಾಗಿ ಬಾಳುವುದನ್ನು ಕಲಿತುಕೊಳ್ಳೋಣ ಎಂಬ ಸಂದೇಶ ನೀಡಿದರು.
ಉಪವಿಭಾಗಾಧಿಕಾರಿ ಮಮತಾ ದೇವಿ ಮಾತನಾಡಿ, ಭಟ್ಕಳಕ್ಕೆ ಬರುವ ಮುಂಚೆ ಭಟ್ಕಳದ ಕುರಿತಂತೆ ಅನೇಕಾರು ತಪ್ಪು ಮಾಹಿತಿಗಳನ್ನು ಕೇಳಿದ್ದೆ. ಆದರೆ ಭಟ್ಕಳದ ಜನರು ಅತ್ಯಂತ ಶಾಂತಿ, ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಇದಕ್ಕೆ ಈ ಈದ್ ಸೌಹಾರ್ದ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಾಹಿತಿ ಗಂಗಾಧರ ನಾಯ್ಕ, ಭಟ್ಕಳದ ಮಣ್ಣಿನಲ್ಲಿ ಸಾಮರಸ್ಯದ ಗುಣವಿದೆ. ಇಲ್ಲಿನ ಇತಿಹಾಸವನ್ನು ಮೆಲುಕು ಹಾಕಿದಾಗ ಅದು ನಮಗೆ ಗೊತ್ತಾಗುತ್ತದೆ. ಆದ್ದರಿಂದ ಭಟ್ಕಳ ಸೂಕ್ಷ್ಮ ಪ್ರದೇಶವಲ್ಲ, ಇದು ಕೋಮು ಸೌಹಾರ್ದತೆಗೆ ಸೂಕ್ತ ಪ್ರದೇಶವಾಗಿದೆ, ಸೌಹಾರ್ದತೆಯೆ ಈ ನೆಲದ ಉಸಿರಾಗಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದರು.
ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ, ನಮಗೆ ಗಾಂಧಿಯ ಹಿಂದೂ ಬೇಕೆ ಹೊರತು ಗೋಡ್ಸೆಯ ಹಿಂದುವಲ್ಲ. ಪ್ರವಾದಿ ಮುಹಮ್ಮದ್ ರ ಇಸ್ಲಾಮ್ ಬೇಕೆ ಹೊರತು ಉಸಾಮಾ ಬಿನ್ ಲಾಡೆನ್ ಇಸ್ಲಾಮ್ ಅಲ್ಲ ಎಂದರು.
ಮಾಜಿ ಶಾಸಕ ಜೆ.ಡಿ.ನಾಯ್ಕ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಭಟ್, ಸದ್ಭಾವನಾ ಮಂಚ್ ಅಧ್ಯಕ್ಷ ಸತೀಶ್‍ಕುಮಾರ್ ನಾಯ್ಕ, ಸಂದರ್ಭೋಚಿತವಾಗಿ ಮಾತನಾಡಿ ಸೌಹಾರ್ದ ಸಂದೇಶವನ್ನು ನೀಡಿದರು.
ಭಟ್ಕಳ ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಇಂಜಿನೀಯರ್ ನಝೀರ್ ಆಹ್ಮದ್ ಖಾಝಿ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದ ಸಂಚಾಲಕ ಮುಹಮ್ಮದ್ ರಝಾ ಮಾನ್ವಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಅಧ್ಯಕ್ಷ ಎಸ್.ಎಂ.ಪರ್ವಾಝ್, ಜನತಾ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎ.ಬಿ.ರಾಮರಥ, ಜರ್ನಲಿಸ್ಟ್ ಯುನಿಯನ್ ಜಿಲ್ಲಾಧ್ಯಕ್ಷ ಮನಮೋಹನ್ ನಾಯ್ಕ, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಮಹಿಳಾ ಘಟಕದ ಅಧ್ಯಕ್ಷೆ ಸಾಜಿದಾ ಅಂಜುಮ್, ಅನ್ಫಾಲ್ ಹೈಪರ್ ಮಾರ್ಕೇಟ್ ಮಾಲಿಕ ಇಷ್ತಿಯಾಕ್ ಇದ್ದರು.
ಬಹುಮಾನ ವಿತರಣೆ: ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಸೀರತ್ ಪ್ರಬಂಧ ಸ್ಪರ್ಧೆಯ ವಿಜೇತರಾದ ಶಿರಸಿಯ ರಾಜೇಶ್ವರಿ ಹೆಗಡೆ, ಭಟ್ಕಳದ ರಾಘವೇಂದ್ರ ಮಡಿವಾಳ, ಗೋಕರ್ಣದ ಸಂಗೀತಾ ಶೆಟ್ಟಿ ಅವರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ನೀಡಲಾಯಿತು.