ಹೊನ್ನಾವರ: ವಿಪತ್ತು ನಿರ್ವಹಣೆಯಲ್ಲಿ ಅಧಿಕಾರಿಗಳ ಪಾತ್ರ ಬಹುಮುಖ್ಯವಾಗಿದ್ದು, ನೆರೆ ಪೀಡಿತ ಪ್ರದೇಶದ ಮಾಹಿತಿಯನ್ನು ಸಂಗ್ರಹಿಸಿರಬೇಕು. ವಿವಿಧ ಪ್ರದೇಶಗಳಿಗೆ ನೇಮಕಗೊಂಡಿರುವ ನೋಡಲ್ ಅಧಿಕಾರಿಗಳು ಸಕಾಲಕ್ಕೆ ಮಾಹಿತಿ ಪಡೆದು ತಹಶೀಲ್ದಾರ ಕಾರ್ಯಾಲಯಕ್ಕೆ ವರದಿ ಸಲ್ಲಿಸಬೇಕು. ಜಿಲ್ಲಾಡಳಿತದಿಂದ ಬರುವಂತಹ ಮಾಹಿತಿಯನ್ನು ಆಧರಿಸಿ ಕಾರ್ಯನಿರ್ವಹಿಸಬೇಕು. ಕಳೆದ ವರ್ಷ ಆದಂತಹ ಲೋಪಗಳು ಪುನಾರವರ್ತನೆಯಾಗಬಾರದು ಎಂದು ಉಪವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್. ಹೇಳಿದರು.
ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮದ ಕುರಿತಾಗಿ ಮಿನಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಕಳೆದ ಬಾರಿ ನೆರೆಬಂದಾಗ ಸರ್ಕಾರದಿಂದ ನೂರುಕೋಟಿ ಅನುದಾನವು ತಾಲೂಕಿನಲ್ಲಿ ಸರಿಯಾದ ರೀತಿಯಲ್ಲಿ ಹಂಚಿಕೆಯಾಗಿದ್ದು ಈ ಬಾರಿಯು ಅಧಿಕಾರಿಗಳು ಹಾನಿ ವಿವರ ಸಕಾಲದಲ್ಲಿ ನೀಡಬೇಕು. ನಿಯೋಜಿತ ಅಧಿಕಾರಿಗಳು ಅನಾರೋಗ್ಯ ಅಥವಾ ಇನ್ನಿತರ ನೆಪವೊಡ್ಡಿ ಕರ್ತವ್ಯ ಲೋಪ ಎಸಗಬಾರದು. ಒಂದೊಮ್ಮೆ ಅನಿವಾರ್ಯ ಪರಿಸ್ಥಿತಿಯಲ್ಲಿ ಬೇರೆ ಅಧಿಕಾರಿಗಳನ್ನು ನಿಯೋಜಿಸಿ ಈ ಬಗ್ಗೆ ಮಾಹಿತಿ ನೀಡಬೇಕು. ತಾಲೂಕಿನ ಗುಂಡಬಾಳ, ಭಾಸ್ಕೇರಿ, ಬಡಗಣಿ ನದಿ ತಿರದ ಪ್ರವಾಹ ಪೀಡಿತ ಪ್ರದೇಶವಾಗಿದ್ದು, ನೆರೆ ಬಂದಲ್ಲಿ ಈ ಭಾಗದಲ್ಲಿ ನಿಯೋಜನೆಗೊಂಡ ಅಧಿಕಾರಿಗಳು ಹೆಚ್ಚಿನ ಸಮಯ ಸ್ಥಳದಲ್ಲೆ ಹಾಜರಿದ್ದು ನೆರೆ ಉಂಟಾದಲ್ಲಿ ಕೂಡಲೇ ತಗ್ಗು ಪ್ರದೇಶದಲ್ಲಿ ವಾಸ್ತವ್ಯದಲ್ಲಿರುವವರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಬೇಕು ಎಂದು ಅವರು ಈ ವೇಳೆ ಸೂಚಿಸಿದರು.
ನಿಯೋಜಿತ ಅಧಿಕಾರಿಗಳಿಗೆ ನೀಡಿರುವ ದೂರವಾಣಿಯು ಸಂಪರ್ಕ ಸಾಧ್ಯ ಸ್ಥಿತಿಯಲ್ಲಿದೆಯೆ ಎಂದು ಪರೀಶಿಲಿಸಿಕೊಳ್ಳಿ, ಇಲ್ಲವಾದರೆ ಈ ಬಗ್ಗೆ ತಹಶೀಲ್ದಾರ್ ಗಮನಕ್ಕೆ ತನ್ನಿ. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಸೂಚಿಸಿದರು. ವಿಪತ್ತು ನಿರ್ವಹಣೆ ಮಾಹಿತಿ ಪಡೆಯಲು ವಾಟ್ಸಾಪ್ ಗ್ರೂಪ್ ರಚಿಸಲಾಗಿದೆ, ಅದರಲ್ಲಿ ಪ್ರತಿದಿನದ ಮಾಹಿತಿ ಹಾಕಿ ಎಂದರು.
ಸಭೆಗೆ ಗೈರಾದ ಅಧಿಕಾರಿಗ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ಇಂತಹ ಅಧಿಕಾರಿಗಳನ್ನು ಯಾಕೆ ನಿಯೋಜನೆ ಮಾಡುತ್ತೀರಿ? ಎಂದು ತಹಶೀಲ್ದಾರವರಿಗೆ ಪ್ರಶ್ನಿಸಿದರು. ತಾಲೂಕಿನ ಎಲ್ಲಾ ಜೆಸಿಬಿ ವರ್ಕರ್ ಗಳ ಸಂಪರ್ಕ ತೆಗೆದಿಟ್ಟುಕೊಳ್ಳಿ. ಗೇರುಸೊಪ್ಪಾ, ಮಾವಿನಕುರ್ವಾ, ಮಾಗೋಡು, ಖರ್ವಾ, ಚಿಕ್ಕನಕೋಡ್, ಹಾಡಗೇರಿ ಮತ್ತಿತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತದೆ. ಈ ಬಗ್ಗೆ ಹೆಚ್ಚು ಗಮನಹರಿಸಿಕೊಳ್ಳಿ ಎಂದರು.
ಸಭೆಯಲ್ಲಿ ತಹಶೀಲ್ದಾರ್ ನಾಗರಾಜ ನಾಯ್ಕಡ್, ಗ್ರೇಡ್ 2 ತಹಶೀಲ್ದಾರ ಉಷಾ ಪಾವಸ್ಕರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸುರೇಶ್ ನಾಯ್ಕ, ಸಿಪಿಐ ಶ್ರೀಧರ್ ಎಸ್.ಆರ್. ಮತ್ತಿತರರು ಇದ್ದರು.