ಸಿದ್ದಾಪುರ: ತಾಲೂಕಿನ ನಾಣಿಕಟ್ಟಾ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿರುವ ಮೀನಾಕ್ಷಿ ಗೌಡ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾಳೆ.
ಒಟ್ಟು 625 ಅಂಕಗಳಿಗೆ 624 ಅಂಕಗಳನ್ನು ಪಡೆದು ಪ್ರತಿಶತ 99.84ರಷ್ಟು ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾಳೆ. ತೀರಾ ಗ್ರಾಮೀಣ ಪ್ರದೇಶದ ಹಿಂದುಳಿದ ವರ್ಗದ ವಿದ್ಯಾರ್ಥಿನಿಯಾದ ಈಕೆಯ ಸಾಧನೆ ಹುಬ್ಬೇರಿಸುವಂತೆ ಮಾಡಿದ್ದು ಕೂಲಿ ಕಾರ್ಮಿಕರ ಮಗಳಾಗಿರುವ ಮೀನಾಕ್ಷಿ ಗೌಡ ಐಎಎಸ್ ಮಾಡುವ ಕನಸನ್ನು ಹೊಂದಿದ್ದಾಳೆ.
ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ತೀರ ಹಿಂದುಳಿದ ಗ್ರಾಮವೊಂದರ ವಿದ್ಯಾರ್ಥಿನಿ ಮೀನಾಕ್ಷಿ ತನ್ನ ಸ್ವಸಾಮರ್ಥ್ಯದಿಂದ ಶಿಕ್ಷಕ ವರ್ಗದ ಮಾರ್ಗದರ್ಶನದಲ್ಲಿ ಸತತ ಪರಿಶ್ರಮ ಮತ್ತು ಆತ್ಮವಿಶ್ವಾಸದೊಂದಿಗೆ ಈ ಸಾಧನೆಯನ್ನು ಗೈದಿದ್ದಾಳೆ. ಯಾವುದೇ ಶೈಕ್ಷಣಿಕವಾದ ಹಿನ್ನೆಲೆಯಿಲ್ಲದ ಸಾಮಾನ್ಯ ಹಿಂದುಳಿದ ಕುಟುಂಬದಿಂದ ಬಂದಿರುವ ಮೀನಾಕ್ಷಿ ಗೌಡಳ ಸಾಧನೆ ನಿಜಕ್ಕೂ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದು ಹೇಳಬಹುದಾಗಿದೆ. ಕೂಲಿಯನ್ನೇ ಮಾಡಿ ಜೀವನ ಸಾಗಿಸುವ ತಂದೆ- ತಾಯಿ ಮಗಳ ಓದಿನ ಆಸೆಗೆ ನೀರೆರೆದು ಪೋಷಿಸಿದರು. ಆರಂಭದಿಂದಲೂ ಕಲಿಕೆಯಲ್ಲಿ ಚುರುಕುತನವನ್ನು ಹೊಂದಿರುವ ಮೀನಾಕ್ಷಿ ಪ್ರಾಥಮಿಕ ಶಾಲೆ ಹಂತದಲ್ಲಿ ಮೊದಲ ಸ್ಥಾನದಲ್ಲಿ ಇರಲಿಲ್ಲ. ಆದರೆ ಪ್ರೌಢಶಾಲೆಯ ಪ್ರವೇಶ ಪಡೆಯುತ್ತಿದ್ದಂತೆ ಆರಂಭದಲ್ಲಿ ಅಗ್ರಸ್ಥಾನವನ್ನು ಪಡೆಯುತ್ತಾ ಸಾಗಿದ್ದಳು. ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಯನ್ನು ಮಾಡುವಲ್ಲಿ ಸಾಧ್ಯವಾಗಿದೆ.
ತಾಲೂಕಿನ ಹಾರ್ಸಿಕಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಪಗೊಡ ಗ್ರಾಮದ ಹೊನ್ನೆಕುಳಿ ಎಂಬ ಪುಟ್ಟ ಮಜರೆಯ ನಿವಾಸಿ ಮೀನಾಕ್ಷಿ ಗೌಡ ಪ್ರೌಢ ಶಾಲೆಗೆ ಹೋಗಬೇಕೆಂದರೆ ಪ್ರತಿದಿನ ಎರಡು ಮೈಲಿಗಿಂತ ಹೆಚ್ಚು ನಡೆದು, ಶಿರಸಿ ರಸ್ತೆಗೆ ಬಂದು ಬಸ್ಸಿನಲ್ಲಿ ನಾಣಿಕಟ್ಟಾ ಶಾಲೆಗೆ ಹೋಗಬೇಕು. ಇದರಲ್ಲಿ ಹೆಚ್ಚು ಸಮಯ ಹೋಗುತ್ತಿತ್ತು. ಆದರೂ ಉಳಿದ ಸಮಯದಲ್ಲಿ ಮನೆಯವರಿಗೆ ಮನೆಗೆಲಸದಲ್ಲಿ ನೆರವಾಗಿ ಓದು ಮುಂದುವರಿಸಿದ್ದಳು. ತನ್ನ ಶ್ರದ್ಧೆ, ಪರಿಶ್ರಮದಿಂದ ಓದಿನಲ್ಲಿ ಇದೀಗ ಸಾಧನೆ ಮಾಡಿದ್ದಾಳೆ.
ಕೋಟ್…
ನನಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಸ್ಥಾನ ಬರುವ ನಿರೀಕ್ಷೆ ಇತ್ತು. ಈಗ ತುಂಬಾ ಖುಷಿ ಆಗಿದೆ. ಇದಕ್ಕೆ ನಮ್ಮ ಶಾಲೆಯ ಶಿಕ್ಷಕರ ಮಾರ್ಗದರ್ಶನ ಕಾರಣ. ನಾನು ಮುಂದೆ ಐಎಎಸ್ ಮಾಡಬೇಕು ಎನ್ನುವ ಕನಸು ಹೊಂದಿದ್ದೇನೆ.–ಮೀನಾಕ್ಷಿ ಗೌಡ, ಸಾಧಕ ವಿದ್ಯಾರ್ಥಿನಿ
ಮಗಳು ಓದಿನಲ್ಲಿ ಮುಂದೆ ಇದ್ದಳು. ಇದು ನಮಗೆ ದೊಡ್ಡ ಖುಷಿ ವಿಚಾರ. ನಾವು ಕೂಲಿ ಮಾಡಿಯೆ ಜೀವನ ಮಾಡಬೇಕು. ಮುಂದೆ ಹೆಚ್ಚು ಓದಿಸೋದು ಹೇಗೋ ಗೊತ್ತಾಗುತ್ತಿಲ್ಲ. ಆದರೂ ಅವಳ ಇಚ್ಛೆಯಂತೆ ಕಲಿಸಲು ಪ್ರಯತ್ನಿಸುತ್ತೇವೆ.–ಗೋದಾವರಿ ಗೌಡ, ತಾಯಿ
ಮೀನಾಕ್ಷಿ ಗೌಡಳ ಸಾಧನೆಗೆ ಅಭಿನಂದನೆಗಳು. ಈಕೆ ಗ್ರಾಮೀಣ ಪ್ರದೇಶದ ಪುಟ್ಟ ಹಳ್ಳಿಯಿಂದ ಬಂದು ನಮ್ಮ ಸರಕಾರಿ ಪ್ರೌಢಶಾಲೆಯಲ್ಲಿ ಓದಿ ಸಾಧನೆ ಮಾಡಿ ಇತರರಿಗೆ ಮಾದರಿಯಾಗಿದ್ದಾಳೆ.– ಸದಾನಂದ ಸ್ವಾಮಿ, ಬಿಇಓ