ಮುಂಡಗೋಡ: ತಾಲೂಕಿನ ಗ್ರಾಮ ಪಂಚಾಯತಿಯ ಸಿಬ್ಬಂದಿಗಳ ನೇರ ನೇಮಕಾತಿ ಹೊಂದಿದ ಸಿಬ್ಬಂದಿಗಳಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಪರಿಗಣಿಸಿ ಹಾಗೂ ಅವರು ಹಿರಿತನ ಅನುಭವ ಆಧಾರದ ಮೇಲೆ ಅನುಮೋದನೆ ನೀಡುವಂತೆ ಮತ್ತು ವಿವಿಧ ಬೇಡಿಕೆ ಈಡೇರಿಸುವಂತೆ ದಲಿತ ಮುಖಂಡ ಬಸವರಾಜ ಸಂಗಮೇಶ್ವರ ನೇತೃತ್ವದಲ್ಲಿ ಗ್ರಾ.ಪಂ ಸಿಬ್ಬಂದಿಗಳು ಸೋಮವಾರ ಜಿ.ಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಪ್ರಿಯಾಂಗ್ ಎಂ ಅವರಿಗೆ ಮನವಿ ಮಾಡಿದರು.
ತಾಲೂಕಿನ 16 ಗ್ರಾಮ ಪಂಚಾಯತಿಗಳಲ್ಲಿ 20 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಆ ವೇಳೆ ಗುಮಾಸ್ತ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್ ಗಳಾಗಿ ನೇಮಕ ಮಾಡಿಕೊಂಡವರಿಗೆ ಪ್ರಥಮವಾಗಿ ಮಾಸಿಕ 50ರೂ ಯಿಂದ ಪ್ರಸ್ತುತ 12000ರೂ ವೇತನ ನೀಡುತ್ತಾ ಬಂದಿದ್ದಾರೆ. ಆದರೆ ಮುಂಡಗೋಡ ತಾಲೂಕಿನಿಂದ ಸುಮಾರು 70 ರಿಂದ 80 ಸಿಬ್ಬಂದಿಗಳಿಗೆ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆಯಾಗದೆ ಸರ್ಕಾರಿ ನೌಕರಿಯಿಂದ ವಂಚಿತರಾಗಿದ್ದೇವೆ. ಸರಿಯಾದ ಸಮಯಕ್ಕೆ ವೇತನ ಆಗದೇ ಸಿಬ್ಬಂದಿಗಳು ಬದುಕು ನಡೆಸುವುದು ಕಷ್ಟಕರವಾಗಿದೆ. ಹೀಗಾಗಿ, ತಕ್ಷಣವೇ ಅನುಮೋದನೆ ನೀಡಿ ಸಹಕಾರಿಯಾಗಬೇಕೆಂದು ಅಧಿಕಾರಿಗಳ ಮುಂದೆ ಸಿಬ್ಬಂದಿಗಳು ಅಳಲನ್ನು ತೋಡಿಕೊಂಡರು.
ಸಿಬ್ಬಂದಿಗಳ ಸಮಸ್ಯೆಯನ್ನು ಆಲಿಸಿ ಮಾತನಾಡಿದ ಜಿಪಂ ಸಿಇಒ ಪ್ರಿಯಾಂಗ್ ಎಂ, ಗ್ರಾ.ಪಂ, ಸಿಬ್ಬಂದಿಗಳ ನೇಮಕಾತಿ ವಿಷಯಕ್ಕೆ ಸಂಬಂಧಪಟ್ಟಂತೆ ಸರ್ಕಾರದ ನಿಯಮದಂತೆ ಅನುಮೋದನೆ ಪ್ರಕ್ರಿಯೆ ಮಾಡಿದ್ದೇವೆ. ಜಿಲ್ಲೆಯಲ್ಲಿಯೇ 1 ಕೋಟಿಕ್ಕಿಂತ ಹೆಚ್ಚು ಮುಂಡಗೋಡ ತಾಲೂಕಿನ ಗ್ರಾ.ಪಂ ಸಿಬ್ಬಂದಿಗಳ ವೇತನ ಬಾಕಿ ಇದೆ. ಇದಕ್ಕೆ ಕಾರಣ ಒಂದೊಂದು ಗ್ರಾ.ಪಂಗಳಲ್ಲಿ ನಿಯಮಗಳಕ್ಕಿಂತ ಹೆಚ್ಚು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿಯೂ ಈ ತಾಲೂಕಿನಲ್ಲಿ ಸಂಪನ್ಮೂಲ ಕಡಿಮೆ ಇದೆ. ಈ ಕಾರಣದಿಂದ ಗ್ರಾ.ಪಂಗಳಲ್ಲಿ ಸಿಬ್ಬಂದಿಗಳ ವೇತನ ಬಾಕಿ ಇದೆ. ಈ ಬಗ್ಗೆ ಮುಂದಿನ ದಿನದಲ್ಲಿ ಗಮನಹರಿಸುತ್ತೇನೆ. ಸಿಬ್ಬಂದಿಗಳ ಅನುಮೋದನೆ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದರು.
ವಿವಿಧ ಬೇಡಿಕೆ ಈಡೇರಿಸುವಂತೆ ಸಿಬ್ಬಂದಿಗಳು ಜಿ.ಪಂ ಸಿಇಒ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮುನ್ನ ತಹಶೀಲ್ದಾರ ಮತ್ತು ತಾ.ಪಂ ಇಒ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಸಂಗಮೇಶ್ವರ, ಮಲ್ಲಿಕಾರ್ಜುನ ಸುಣಗಾರ, ಅರ್ಜುನ ಸನವಳ್ಳಿ, ಮಂಜುನಾಥ, ಮಾದೇಶ ಹುಲ್ಲೂರ, ಸುರೇಶ ಕರ್ಜಗಿ, ಮಾಂಬು ಗಾವಡೆ, ಜಾರ್ಜ್ ಬೆಂಬಾಮಿನ್, ಸೋಮಲಿಂಗಪ್ಪ ದೇವಲತ್ತಿ, ನವಲು ಶೆಳಕೆ ಸೇರಿದಂತೆ ಮುಂತಾದವರಿದ್ದರು.